ಗಿರಿಜಿಲ್ಲೆಯಲ್ಲಿ ಅಬ್ಬರಿಸಿದ ಬಿರುಗಾಳಿ ಮಳೆ

Published on

ಕೆಂಭಾವಿ: ಭಾನುವಾರ ರಾತ್ರಿ ಸುರಿದ ಭಾರಿ ಬಿರುಗಾಳಿ ಮಳೆಯಿಂದ ಪಟ್ಟಣ ಸೇರಿ ವಲಯದ ಹಲವು ಗ್ರಾಮಗಳಲ್ಲಿ ಅಪಾರ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಂಜೆ ೭ರ ಸುಮಾರಿಗೆ ಆರಂಭವಾದ ಮಳೆ ಸತತ ಒಂದುಗಟೆವರೆಗೂ ತನ್ನ ಅರ್ಭಟ ಜೋರಾಗಿತ್ತು.

ಬಿರುಗಾಳಿ ರಭಸಕ್ಕೆ ಮುಖ್ಯ ಬಜಾರ ಪ್ರದೇಶದ ಹಲವು ಅಂಗಡಿಗಳಿಗೆ ನೀರು ನುಗ್ಗಿ ಬಟ್ಟೆ ಬರೆ ಸೇರಿ ಇನ್ನಿತರೆ ವಸ್ತುಗಳು ನೀರಿಗೆ ಆಹುತಿಯಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ವಾರ್ಡ್ ನಂ. ೧ರಲ್ಲಿ ಅತಿ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಪೊಲೀಸ್ ಕಚೇರಿ ಮತ್ತು ಸರ್ಕಾರಿ ಶಾಲೆಯಲ್ಲಿರುವ ಹಳೇ ಆಲದ ಮರ ಉರುಳಿ ಬಿದ್ದಿದ್ದು, ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಲ್ಲದೆ ಪಟ್ಟಣದ ಇನ್ನು ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದ ಕಾರಣ ಸೋಮವಾರ ಮಧ್ಯಾಹ್ನದವರೆಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು.

ಇನ್ನೂ ಕಾರ್ಯಾರಂಭ ಮಾಡದ ಯಡಿಯಾಪುರ ರಸ್ತೆಯಲ್ಲಿರುವ ಸಣ್ಣ ಕೈಗಾರಿಕೆಯೊಂದು ಗಾಳಿಯ ರಭಸಕ್ಕೆ ಸಂಪೂರ್ಣ ನೆಲಕ್ಕೆ ಉಳುರುಳಿದೆ. ಇದಕ್ಕೆ ಅಳವಡಿಸಿದ ಪತ್ರಾಸ್‌ಗಳು ಗಾಳಿಯ ರಭಸಕ್ಕೆ ೩ ಕಿಮೀನಷ್ಟು ದೂರ ಹಾರಿಹೋಗಿ ಯಂತ್ರಗಳು ಚಲ್ಲಾಪಿಲ್ಲಿಯಾಗಿವೆ. ರಾಚಪ್ಪ ಕುಂಬಾರ ಎಂಬುವರಿಗೆ ಸೇರಿದ ಈ ಕೈಗಾರಿಕೆಯಲ್ಲಿ ಮಿನಿ ರೈಸ್ ಮಿಲ್, ಮಿನಿ ಆಯಿಲ್ ಮಿಲ್ ಸೇರಿ ಹಲವು ಸಣ್ಣ ಪ್ರಮಾಣದ ಕೈಗಾರಿಕೆ ಸ್ಥಾಪನೆ ಮಾಡಿ ಇನ್ನೆರಡು ದಿನಗಳಲ್ಲಿ ಕಾರ್ಯಾರಂಭ ಮಾಡಬೇಕಿದ್ದ ಈ ಕೈಗಾರಿಕೆಗೆ ಬಿರುಗಾಳಿ ಹೊಡೆತಕ್ಕೆ ನಲುಗಿದ್ದು ೪೦ ಲಕ್ಷಕ್ಕೂ ಅಧಿಕ ರೂ. ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಈ ಕೈಗಾರಿಕೆ ಬಳಿ ಇರುವ ಬಸವರಾಜ ಬೈಜಬಾಳ ಎಂಬುವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ನಿಂಬೆ ಮತ್ತು ಪೇರಲ ಮರಗಳು ಸಹ ನೆಲಕ್ಕುರುಗಳಿದ್ದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಭಾನುವಾರ ೪೬.೦೬ ಮಿಮೀ ಮಳೆಯಾಗಿದ್ದು, ಇದರಿಂದ ಹಲವು ಅವಾಂತರ ಸೃಷ್ಟಿಯಾಗಿವೆ. ಆದರೆ ಸರ್ಕಾರ ರೈತರ ನೆರವಿಗೆ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಎಲ್ಲಿ ನೋಡಿದರು ಮನಕಲಕುವು ದೃಶ್ಯ: ಕೆಂಭಾವಿಯಿAದ ಯಡಿಯಾಪು ಗ್ರಾಮಕ್ಕೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಹಾಕಿದ ಎಲ್ಲ ವಿದ್ಯುತ್ ಕಂಬಗಳು ಮತ್ತು ಭಾರಿ ಗಾತ್ರದ ಮರಗಳು ಭೂಮಿಗೆ ಅಪ್ಪಳಿಸಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಜಮೀನುಗಳಲ್ಲಿರುವ ರೈತರ ಗುಡಿಸಲು, ವಿದ್ಯುತ್ ಪರಿವರ್ತಕಗಳು, ಕೋಳಿ ಗುಡಿಸಲು, ದನಕರು ಕಟ್ಟುವ ಗುಡಿಸಲು ಸೇರಿ ಬಿರುಗಾಳಿ ಮಳೆಗೆ ನೆಲಕಚ್ಚಿದ್ದರಿಂದ ಎಲ್ಲೆಡೆ ಮನಕಲಕುವ ದೃಶ್ಯ ಕಂಡು ಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net