

ಕಳಸ: ಎಂಟು ದಿನಗಳಿಂದ ನಡೆಯುತ್ತಿದ್ದ ಕಲಶೇಶ್ವರ ದೇವರ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಹರಿಹರ ಸಮಾಗಮದೊಂದಿಗೆ ತೆರೆಬಿದ್ದಿತು. ಗಿರಿಜಾ ಕಲ್ಯಾಣ ನಿಮಿತ್ತ ಹಲವಾರು ಧಾರ್ವಿುಕ ಕಾರ್ಯಕ್ರಮಗಳು ನಡೆದಿದ್ದವು. ಸೋಮವಾರ ಗಿರಿಜಾ ಕಲ್ಯಾಣ ಮಹೋತ್ಸವ ನಡೆದಿತ್ತು. ಉತ್ಸವಾದಿ ಕಾರ್ಯಕ್ರಮಗಳು ನಡೆದ ಬಳಿಕ ಮಂಗಳವಾರ ರಾತ್ರಿ ಮಹಾ ಸಂಪೋ›ಕ್ಷಣೆ, ಧಾತ್ರಿ ಹೋಮ, ರಾತ್ರಿ ಬಿಂದು ಮಾಧವ, ಕಾಲಬೈರವ, ವಸಿಷ್ಠ ಗಣಪತಿ ದೆವಸ್ಥಾನದಲ್ಲಿ ಪೂಜೆಗಳು ನಡೆದು ವಸಿಷ್ಠಾತೀರ್ಥದ ಕಲಶೇಶ್ವರ ದೇವರನ್ನು ಹೊತ್ತು ಗಣಪತಿಕಟ್ಟೆಗೆ ತರಲಾಯಿತು.
ಅಲ್ಲಿ ಕಟ್ಟೆ ಪೂಜೆ ನಡೆದು ತ್ರಿಪುರೋತ್ಸವ ನಡೆದ ಬಳಿಕ ದೇವರನ್ನು ಹೊತ್ತು ವೆಂಕಟರಮಣ ದೇವಸ್ಥಾನದ ಬಳಿ ಬರಲಾಯಿತು. ಅಲ್ಲಿ ಹರಿ ಮತ್ತು ಹರರ ಸಮಾಗಮದ ನಂತರ ವಿವಿಧ ಹೂಗಳಿಂದ ಶೃಂಗರಿಸಲ್ಪಟ್ಟ ಪ್ರತ್ಯೇಕ ಮಂಟಪದಲ್ಲಿ ಹರಿ ಹರರನ್ನು ಕುಳ್ಳಿರಿಸಿ ವಿಜೃಂಭಣೆಯ ಉತ್ಸವ ನಡೆಸಲಾಯಿತು.
ಅಶತ್ಥಕಟ್ಟೆಯವರೆಗೆ ನಡೆದ ಉತ್ಸವ ನಂತರ ಹರನು ಗಿರಿಜಾಂಬ ದೇವಸ್ಥಾನಕ್ಕೆ ಬಂದು ಪೂಜೆ ನಡೆದು ಕಲಶೇಶ್ವರ ದೇವಸ್ಥಾನಕ್ಕೆ ಬಂದರೆ, ಹರಿಯು ವೆಂಕಟರಮಣ ದೇವಸ್ಥಾನಕ್ಕೆ ತೆರಳಿದರು. ಇದರೊಂದಿಗೆ ಎಂಟು ದಿನಗಳ ಕಾಲದ ಗಿರಿಜಾ ಕಲ್ಯಾಣ ಉತ್ಸವ ಸಮಾಪನಗೊಂಡಿತು.