ಗಿರಿಜಾ ಕಲ್ಯಾಣ ಮಹೋತ್ಸವ ಪ್ರಾರಂಭ

12Rajesh3
Published on

ಚಾಮರಾಜನಗರ: ಆಷಾಢ ಮಾಸದಲ್ಲಿ ನಡೆಯಲಿರುವ ಶ್ರೀಚಾಮರಾಜೇಶ್ವರಸ್ವಾಮಿ ಮತ್ತು ಶ್ರೀಕೆಂಪನಂಜಾಂಬಾ ಅಮ್ಮನವರ ಸಮೇತ ಬ್ರಹ್ಮರಥೋತ್ಸವದ ಅಂಗವಾಗಿ ನೆರವೇರಲಿರುವ ಶ್ರೀಗಿರಿಜಾ ಕಲ್ಯಾಣ ಮಹೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ಪ್ರಾರಂಭವಾಯಿತು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಶ್ರೀಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ದೇವರನ್ನು ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು. ಅದರಂತೆ ಸಂಜೆ 6 ಗಂಟೆಗೆ ಅನುಜ್ಞಾಪೂರ್ವಕ ಎಣ್ಣೆ ಅರಿಶಿನ ಪ್ರಧಾನ ನೆರವೇರಿಸಲಾಯಿತು. ರಾತ್ರಿ 8 ಗಂಟೆಗೆ ವರಪೂಜಾ ಮಹೋತ್ಸವ ನಡೆಯಿತು. ಬಳಿಕ ಅಲಂಕೃತ ದೇವರ ವಿಗ್ರಹಗಳನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಮೆರವಣಿಗೆಯಲ್ಲಿ ಮಂಗಳವಾದ್ಯದೊಂದಿಗೆ ಅರ್ಚಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ಉತ್ತುವಳ್ಳಿ ಗ್ರಾಮದ ಎಸ್.ಕುಮಾರ್ ತಂಡದವರಿಂದ ವಾದ್ಯಗೋಷ್ಠಿ ಕಾರ್ಯಕ್ರಮ ನಡೆಯಿತು. ಪ್ರಥಮ ದರ್ಜೆ ಗುತ್ತಿಗೆದಾರರಾದ ಕಿಲಗೆರೆ ಚಂದ್ರಶೇಖರ್ ಮತ್ತು ಕರಿಕಲ್ಲು ಉದ್ಯಮಿ ಎಸ್.ಕೆ.ಕಟೀಮರಾಜ ಅವರಿಂದ ಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು.

19ರವರೆಗೂ ಕಾರ್ಯಕ್ರಮ:

ಶ್ರೀಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ಜೂ.15 ರಂದು ಬೆಳಗ್ಗೆ 10 ಗಂಟೆಗೆ ಅಂಕುರಾರ್ಪಣ ಪೂರ್ವಕ ಕನ್ನಡಿ ಕಳಶ ತರಲಾಗುತ್ತದೆ. ಸಂಜೆ 5 ಗಂಟೆಗೆ ಕಾಶಿಯಾತ್ರೆ ಮಹೋತ್ಸವ ನಡೆಯಲಿದೆ. ರಾತ್ರಿ 8 ಗಂಟೆಗೆ ಅಕ್ಷತಾರೋಪಣೆ, ಧಾರಾಮಹೋತ್ಸವ, ಪ್ರಧಾನ ಹೋಮ ಮತ್ತು ಮಹಾಮಂಗಳಾರತಿ ನಡೆಯಲಿದೆ. ನಗರದ ಕಲಾ ಸರಸ್ವತಿ ನಾಟ್ಯ ಸಂಸ್ಥೆ ವತಿಯಿಂದ ವೇದಿಕೆಯಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಜೂ.16 ರಂದು ರಾತ್ರಿ 8 ಗಂಟೆಗೆ ಉಯ್ಯಲೋತ್ಸವ ನಡೆಯಲಿದೆ. ಕಾಳಿಕಾಂಬ ಭಜನಾ ಮಂಡಳಿಯಿಂದ ದೇವರನಾಮ ಮತ್ತು ಶ್ರೀರಂಗಪಟ್ಟಣದ ಪಿ.ಗುರುಪ್ರಸಾದ್ ಅವರಿಂದ ಸ್ಯಾಕೋ್ಸೆೆನ್ ಗಾಯನ ನಡೆಯಲಿದೆ. ಜೂ.17 ರಂದು ರಾತ್ರಿ 8 ಗಂಟೆಗೆ ಔಪಾಸನೆ ಪಾಕಿನಿ ಮಹೋತ್ಸವ ಮತ್ತು ಮೈಸೂರಿನ ರೂಪಶ್ರೀ ಆನಂದ್ ಅವರಿಂದ ಭಕ್ತಗೀತೆಗಳ ಗಾಯನ ನಡೆಯಲಿದೆ. ಜೂ.18 ರಂದು ರಾತ್ರಿ 8 ಗಂಟೆಗೆ ಔಪಾಸನೆ ಶೇಷಹೋಮ, ನಾಕಬಲಿ, ಗಜಾರೋಹಣ ಪೂಜೆ ಮತ್ತು ಗೃಹಪ್ರವೇಶ ಮಹೋತ್ಸವ ನಡೆಯಲಿದೆ. ವೇದಿಕೆಯಲ್ಲಿ ಮಹೇಶ್ ತಂಡದವರಿಂದ ಭಕ್ತಿಗೀತೆ ಮತ್ತು ಭಾವಗೀತೆ ಕಾರ್ಯಕ್ರಮ ನಡೆಯಲಿದೆ. ಜೂ.19 ರಂದು ಬೆಳಗ್ಗೆ ದೇವತಾ ಉದ್ವಾಸನೆ, ವಿವಾಹ ದೀಕ್ಷಾ ವಿಸರ್ಜನೆ, ರಾತ್ರಿಯಲ್ಲಿ ಪುಷ್ಪಾಂದೋಳಿಕೋತ್ಸವ, ಶಯನೋತ್ಸವ ನಡೆಯಲಿದೆ. ವೇದಿಕೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ನೇತೃತ್ವದಲ್ಲಿ ಸಂಜೆ 6 ಗಂಟೆಗೆ ಶ್ರೀಕೆಂಪನಾಂಜಾಂಬ ಸಮೇತ ಶ್ರೀಚಾಮರಾಜೇಶ್ವರಸ್ವಾಮಿ ಉತ್ಸವ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net