ಗಿರಿಜನೇತರರಿಂದ ಆದಿವಾಸಿಗಳಿಗೆ ತೊಂದರೆ

Published on

ಹುಣಸೂರು: ತಾಲೂಕಿನ ತರಿಕಲ್ ರಂಗಯ್ಯನಕೊಪ್ಪಲು ಹಾಡಿಯ ಆದಿವಾಸಿ ಜನರ ಕೃಷಿಭೂಮಿಯಲ್ಲಿ ಗಿರಿಜನೇತರರು ದಬ್ಬಾಳಿಕೆಯಿಂದ ಮನೆ ಕಟ್ಟಿಕೊಂಡು ತೊಂದರೆ ಕೊಡುತ್ತಿದ್ದು, ಲೋಕಾಯುಕ್ತರ ನಿರ್ದೇಶನಕ್ಕೂ ಅಧಿಕಾರಿಗಳು ಮತ್ತು ಮುಖಂಡರು ಬೆಲೆ ಕೊಡುತ್ತಿಲ್ಲ ಎಂದು ಹಾಡಿಯ ಮುಖ್ಯಸ್ಥ ದೊಡ್ಡ ಹೆತ್ತಯ್ಯ ಆರೋಪಿಸಿದ್ದಾರೆ.

ಗಿರಿಜನೇತರನ್ನು ತೆರವುಗೊಳಿಸಲು ಕೋರಿ ತಹಸೀಲ್ದಾರ್‌ಗೆ ಮಾಡಿದ್ದ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ತೆರವುಗೊಳಿಸುವ ಆದೇಶ ನೀಡಿದ್ದರೂ ಗ್ರಾಮ ಪಂಚಾಯಿತಿಯಾಗಲಿ, ಕಂದಾಯ ಅಧಿಕಾರಿಗಳಾಗಲಿ ಕ್ರಮವಹಿಸಲಿಲ್ಲ. ಇದರ ವಿರುದ್ಧ ಫೆ.12ರಂದು ಲೋಕಾಯುಕ್ತಕ್ಕೆ ದೂರು ನೀಡಿದ ಪರಿಣಾಮ ಲೋಕಾಯುಕ್ತರು ಒಂದು ವಾರದಲ್ಲಿ ವರದಿ ನೀಡಲು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಅದರಂತೆ ಜೂ.26ರಂದು ಹಾಡಿಗೆ ಬಂದ ಅಧಿಕಾರಿಗಳು ಸರ್ವೇ ಇಲಾಖೆ ಸಿಬ್ಬಂದಿಯನ್ನು ಕರೆತರುತ್ತೇವೆಂದು ತಿಳಿಸಿ ಹೋದವರು ಮತ್ತೆ ಬಂದಿಲ್ಲ. ಈ ಸ್ಥಳೀಯ ಮುಖಂಡರ ಒತ್ತಡದ ನಡುವೆ ಹಾಡಿಯಲ್ಲಿರುವ ನಿವಾಸಿಗಳಿಂದ ಮಾಹಿತಿ ಪಡೆಯದೆ ಗಿರಿಜನೇತರರಿಗೆ ಅನುಕೂಲವಾಗುವ ರೀತಿಯಲ್ಲಿ ವರದಿ ತಯಾರಿಸಲು ಅಧಿಕಾರಿಗಳು ಮುಂದಾಗಿರುವ ಅನುಮಾನ ಗಿರಿಜನರನ್ನು ಕಾಡುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಇತ್ತ ಗಮನಹರಿಸಿ ಗಿರಿಜನರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ದೊಡ್ಡಹೆತ್ತಯ್ಯ ನೀಡಿರುವ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net