

ಗೋಣಿಕೊಪ್ಪ: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಂಬುಕಾಡು ಗಿರಿಜನ ಹಾಡಿಯಲ್ಲಿ ಬುಧವಾರ ತಡರಾತ್ರಿ ಕಾಡಾನೆ ದಾಳಿಗೆ ವಾಸದ ಮನೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿ ವಾಸವಿದ್ದ ಯರವರ ಶಿವು ಎಂಬುವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
60ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ವಾಸವಿರುವ ಬೊಂಬುಕಾಡು ಹಾಡಿಯಲ್ಲಿ ಯರವರ ಶಿವು ಕೂಡ ಗುಣಮಟ್ಟದ ಶೀಟ್ವುನೆ ನಿರ್ವಿುಸಿಕೊಂಡು ಹಲವು ವರ್ಷಗಳಿಂದ ವಾಸವಿದ್ದಾರೆ. ಗುರುವಾರ ಎಂದಿನಂತೆ ಬೆಳಗ್ಗೆ ಕೂಲಿ ಕೆಲಸ ಮುಗಿಸಿಕೊಂಡು ಬಂದು ಮನೆಯಲ್ಲಿ ಮಲಗಿದ್ದರು. ಆದರೆ ಮಧ್ಯರಾತ್ರಿ 12 ಗಂಟೆಯಲ್ಲಿ ಹಾಡಿ ಬಳಿ ಬಂದ ಕಾಡಾನೆ ಮನೆ ಮೇಲೆ ದಾಳಿ ಮಾಡಿದೆ. ಈ ವೇಳೆ ಒಳಗೆ ಮಲಗಿದ್ದ ಶಿವು, ಹಂಚುಗಳು ಹಾಸಿಗೆ ಬಳಿ ಬೀಳುತ್ತಿದ್ದಂತೆಯೇ ಎಚ್ಚರಗೊಂಡು ಗಾಬರಿಯಿಂದ ಹೊರ ಹೊರ ಬಂದರು. ಈ ವೇಳೆ ಆನೆ ಮನೆಯ ಶೀಟ್ ಅನ್ನು ಸಂಪೂರ್ಣ ಧ್ವಂಸಗೊಳಿಸಿ ಕಾಡು ಸೇರಿಕೊಂಡಿತು.
ಅರಣ್ಯದಂಚಿನಲ್ಲಿರುವ ಬೊಂಬುಕಾಡು ಗಿರಿಜನ ಹಾಡಿಗೆ ಹೊಂದಿಕೊಂಡಂತೆ ಸುರಕ್ಷತಾ ಕ್ರಮವಾಗಿ ಸೋಲಾರ್ ಬೇಲಿಗಳನ್ನು ಅಳವಡಿಸಲಾಗಿದೆ. ಆದರೆ ಸೋಲಾರ್ ಬೇಲಿ ಮುರಿದು ಬಂದಿರುವ ಕಾಡಾನೆಯು ಹಾಡಿಯತ್ತ ನುಗ್ಗಿ ಮನೆ ಮೇಲೆ ದಾಳಿ ನಡೆಸಿದೆ.
ಭೇಟಿ: ಕಾಡಾನೆ ದಾಳಿಯಿಂದ ಮನೆ ಧ್ವಂಸಗೊಂಡಿರುವ ಮಾಹಿತಿ ತಿಳಿದ ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಶಾಸಕ ಎ.ಎಸ್.ಪೊನ್ನಣ್ಣ ಅವರ ನಿರ್ದೇಶನದ ಮೇರೆಗೆ ಗುರುವಾರ ಮುಂಜಾನೆ ಬೊಂಬುಕಾಡು ಹಾಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮನೆ ಕಳೆದುಕೊಂಡ ಯರವರ ಶಿವು ಪತ್ನಿ ದೇವಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ಈ ಕೂಡಲೇ ಪರಿಹಾರ ಒದಗಿಸಲು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಮತ್ತಿಗೋಡು ಅರಣ್ಯ ವಲಯದ ಅಧಿಕಾರಿ ದಿಲೀಪ್ಕುಮಾರ್, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ಕುಮಾರ್, ಸೇವಾದಳದ ಸದಸ್ಯೆ ರವಿನಾ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವುಕುಮಾರ್, ಗಿರಿಜನ ಮುಖಂಡ ಪಿ.ಎಸ್.ಮಾರ ಸ್ಥಳಕ್ಕೆ ಭಭೇಟಿ ನೀಡಿ ಪರಿಶೀಲಿಸಿದರು.
04 ಜಿಕೆಪಿ 10- ಬೊಂಬುಕಾಡುವಿನಲ್ಲಿ ಕಾಡಾನೆ ದಾಳಿಯಿಂದ ಮನೆ ಧ್ವಂಸಗೊಂಡಿರುವುದು
04 ಜಿಕೆಪಿ 11-ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವ ಸಂಕೇತ್ ಪೂವಯ್ಯ