ಗಿರಿಜನ ವಿದ್ಯಾವಂತರಿಗೆ ಉದ್ಯೋಗ ಕೊಡಿಸಿ

07 HANUR 4
Published on

ಹನೂರು: ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಗಿರಿಜನ ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗ ಕೊಡಿಸುವಂತೆ ತಾಲೂಕು ಆದಿವಾಸಿ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಬುಧವಾರ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಲ್ಲಿ ಮನವಿ ಸಲ್ಲಿಸಿದರು.

ಮೈಸೂರಿನ ನಿವಾಸದಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ವೇಳೆ ತಾಲೂಕು ಅಧ್ಯಕ್ಷ ನಾಗೇಂದ್ರ ಮಾತನಾಡಿ, ಮ.ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆದಿವಾಸಿ ಜನರು ತಲತಲಾಂತರದಿಂದ ವಾಸಿಸುತ್ತಿದ್ದಾರೆ. ಈ ಹಿಂದೆ ಗಿರಿಜನರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹಿಂದೇಟು ಹಾಕುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ಕೆಲವರು ಪದವಿವರೆಗೂ ಶಿಕ್ಷಣ ಪಡೆದಿದ್ದಾರೆ. ಆದರೆ ಉದ್ಯೋಗ ಇಲ್ಲದ ಪರಿಣಾಮ ತುಂಬ ತೊಂದರೆಯನ್ನು ಎದುರಿಸುತ್ತಿದ್ದಾರೆ. ಶಿಕ್ಷಣ ಪಡೆದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಪ್ರಾಧಿಕಾರ ಈವರೆಗೂ ಗಿರಿಜನರಿಗೆ ಉದ್ಯೋಗ ನೀಡಿಲ್ಲ. ಆದ್ದರಿಂದ ಗಿರಿಜನರ ಸಾಮಾಜಿಕ ಹಾಗೂ ಆರ್ಥಿಕ ಹಿತದೃಷ್ಠಿಯಿಂದ ವಿದ್ಯಾವಂತ ಮಕ್ಕಳಿಗೆ ಪ್ರಾಧಿಕಾರದಲ್ಲಿ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಉದ್ಯೋಗ ಕೊಡಿಸಲು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net