ಗಿರಣಿ ಕೈಗಾರಿಕಾ ಕ್ಷೇತ್ರದಲ್ಲಿ ಗುಣಮಟ್ಟ ವೃದ್ಧಿ: *ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್

CFTRI_ ISMT course
Published on

ಮೈಸೂರು: ಸಿಎಫ್‌ಟಿಆರ್‌ಐನಲ್ಲಿ ಗಿರಣಿ ತಂತ್ರಜ್ಞಾನ ಕೋರ್ಸ್ ಕಲಿತ ವಿದ್ಯಾರ್ಥಿಗಳು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ತಿಳಿಸಿದರು.

ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ(ಸಿಎಫ್‌ಟಿಆರ್‌ಐ) ಶುಕ್ರವಾರ ಆಯೋಜಿಸಿದ್ದ 43ನೇ ಐಎಸ್‌ಎಂಟಿ ಕೋರ್ಸ್‌ನ ಸಮಾರೋಪದಲ್ಲಿ ಅವರು ಮಾತನಾಡಿದರು.

ಈ ಕೋರ್ಸ್ ಕಲಿತ 900 ವಿದ್ಯಾರ್ಥಿಗಳು ಬಾಂಗ್ಲಾದೇಶ, ಕಾಂಬೋಡಿಯಾ, ಘಾನಾ, ಜೋರ್ಡಾನ್, ಕಿನ್ಯಾ, ಲಿಬಿಯಾ, ನೇಪಾಳ, ಮಂಗೋಲಿಯಾ, ಓಮನ್, ಶ್ರೀಲಂಕಾ, ಸಿರಿಯಾ, ಯುಎಸಿ ಸೇರಿದಂತೆ 120 ದೇಶಗಳಲ್ಲಿ ಕೆಲಸ ಮಾಡುತ್ತಿದ್ದು ಆ ದೇಶ ಆಹಾರ ಸ್ವಾವಲಂಬನೆ ಸಾಧಿಸಲು ನೆರವಾಗಿದ್ದಾರೆ.

ಜತೆಗೆ, ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಗಿರಣಿ ಕೈಗಾರಿಕಾ ಕ್ಷೇತ್ರದಲ್ಲೂ ಗುಣಮಟ್ಟ ವೃದ್ಧಿಯಾಗಿದೆ ಎಂದು ಹೇಳಿದರು.

ಸಿಎಫ್‌ಟಿಆರ್‌ಐ 1981ರಲ್ಲಿ ಗಿರಣಿ ತಂತ್ರಜ್ಞಾನ ಕೋರ್ಸ್ ಆರಂಭಿಸಿತು. ಕೇಂದ್ರ ಸರ್ಕಾರ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವೆ ಒಡಂಬಡಿಕೆಯೊಂದಿಗೆ ಕಾರ್ಯಾರಂಭಗೊಂಡಿತು. ಗಿರಣಿ ಕೈಗಾರಿಕೆ ಅಗತ್ಯಕ್ಕೆ ತಕ್ಕಂತೆ ಕೋರ್ಸ್ ಅಭಿವೃದ್ಧಿಪಡಿಸಲಾಗಿದೆ.

ಉತ್ತಮ ತಾಂತ್ರಿಕ ಪರಿಣಿತಿ, ನಿರ್ವಹಣೆ ಅಗತ್ಯತೆಯನ್ನು ಪೂರೈಸುವುದರೊಂದಿಗೆ ಕೌಶಲ ಕಲಿಸಲಾಗುತ್ತಿದೆ. ಇದರೊಂದಿಗೆ ಆಧುನಿಕ ಗಿರಣಿ ಕ್ಷೇತ್ರದಲ್ಲಿ ಸವಾಲು ನಿರ್ವಹಣೆಗೆ ಸಜ್ಜುಗೊಳಿಸಲಾಗುವುದು ಎಂದರು.

ಮಾಣಿಕ್‌ಚಂದ್ ಕಂಪನಿಯ ಕಾರ್ಯಕಾರಿ ವ್ಯವಸ್ಥಾಪಕ ಕೆ.ಫಣೀಂದ್ರ ಮಾತನಾಡಿ, 1988ರಲ್ಲಿ ಇದೇ ಸಂಸ್ಥೆಯಲ್ಲಿ ಒಂದು ವರ್ಷದ ಅವಧಿಯ ಕೋರ್ಸ್ ಮಾಡಿದ್ದೆ. ತರಬೇತಿ ಪಡೆದ ನಂತರ ನೈಜೀರಿಯಾ, ಮೊಜಾಂಬಿಕ್ ದೇಶಗಳಲ್ಲಿನ ಆಹಾರ ಉತ್ಪಾದಕ ಕಂಪನಿಗಳಲ್ಲಿ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದೆ.

ಆಫ್ರಿಕಾ ದೇಶಗಳ ಬಡ ಜನರಿಗೆ ಉತ್ತಮ ಗುಣಮಟ್ಟದ ಗೋಧಿ ಉತ್ಪನ್ನಗಳು ಸಿಗುವಂತೆ ಮಾಡಲು ಶ್ರಮಿಸಿದ ಹೆಮ್ಮೆ ನನಗೆ ಇದೆ ಎಂದರು.

ಅಂತಾರಾಷ್ಟ್ರೀಯ ಗಿರಣಿ ತಂತ್ರಜ್ಞಾನ ಶಾಲೆಯು ಅಭಿವೃದ್ಧಿಶೀಲ ದೇಶಗಳು ಆಹಾರ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಲು ಅನುಕೂಲವಾಗಿದೆ. ನಾನು ಲೆಕ್ಕ ಪರಿಶೋಧಕ(ಸಿಎ) ಆಗಬೇಕಿತ್ತು. ಆದರೆ, ಆಹಾರೋದ್ಯಮದ ಬಗ್ಗೆ ಆಸಕ್ತಿ ಹಲವು ದೇಶಗಳನ್ನು ಹಾಗೂ ಜನರನ್ನು ನೋಡುವಂತೆ ಮಾಡಿತು.

ಈಗಿನ ವಿದ್ಯಾರ್ಥಿಗಳು ಸವಾಲು ಸ್ವೀಕರಿಸಬೇಕು. ಗುಣಮಟ್ಟದ ಆಹಾರ ಉತ್ಪನ್ನಗಳಿಗೆ ಬೇಡಿಕೆ ಎಂದಿಗೂ ಇರುತ್ತದೆ. ಆದ್ದರಿಂದ ಯಶಸ್ಸು ಕಾಣಲು ಶ್ರಮಿಸಬೇಕು ಎಂದರು.

ವಿಜ್ಞಾನಿ ಡಾ.ಅಶುತೋಷ್ ಎ.ಇನಾಂದಾರ್, ಎಚ್‌ಆರ್‌ಡಿ ವಿಭಾಗದ ಮುಖ್ಯ ವಿಜ್ಞಾನಿ ಡಾ.ರೇವತಿ ಭಾಸ್ಕರನ್, ಐಎಸ್‌ಎಂಟಿ ಸಂಯೋಜಕ ಬಸವರಾಜ ಮುಂದಲಮನಿ ಇದ್ದರು.

ವರ್ಷಿತಾ ಸಾಧನೆ:

ಐಎಸ್‌ಎಂಟಿ ಕೋರ್ಸ್‌ನಲ್ಲಿ ಧಾನ್ಯ ವಿಜ್ಞಾನದಲ್ಲಿ ಮೊದಲ ಹಾಗೂ ಸಮಗ್ರ ವಿಭಾಗದಲ್ಲಿ 2ನೇ ರ‌್ಯಾಂಕ್ ಪಡೆದ ರಾಜ್ಯದ ಎಸ್.ಆರ್.ವರ್ಷಿತಾ ಅವರಿಗೆ ಚಿನ್ನ, ಬೆಳ್ಳಿ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಸಮಗ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ನೈಜೀರಿಯಾದ ಚಿನೆದು ಚುಕುವಾಲುಕಾ ಎಪುಏಚಿ ಅವರಿಗೆ ಚಿನ್ನ ಹಾಗೂ ಹೈದರಾಬಾದ್‌ನ ನಂದ್ಯಾಲ ಸೂರ್ಯ ತೇಜ್ ಕಂಚಿನ ಪದಕ ಹಾಗೂ ಬೇಕಿಂಗ್ ವಿಜ್ಞಾನದಲ್ಲಿ ಅವ್ನಿಷ್ ಕುಮಾರ್ ಸಿಂಗ್ ಚಿನ್ನದ ಪದಕ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net