ಗಿನ್ನಿಸ್ ದಾಖಲೆಗೆ ಮುಂದಾದ ಅವತಾರ್

10rajesh5
Published on

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಅವತಾರ್ ಡ್ಯಾನ್ಸ್ ಇನ್‌ಸ್ಟಿಟ್ಯೂಟ್ 12ನೇ ವಾರ್ಷಿಕೋತ್ಸವದ ಅಂಗವಾಗಿ ಜಾನಪದ ನೃತ್ಯಗಳ ಬಗ್ಗೆ ತರಬೇತಿ ನೀಡಿ ಇಂಡಿಯಾ ಬುಕ್ ಆ್ ರೆಕಾರ್ಡ್ ಹಾಗೂ ಗಿನ್ನಿಸ್ ದಾಖಲೆಗಾಗಿ ಜಾನಪದ ಅವತಾರ ಎಂಬ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.

ಅವತಾರ್ ಡ್ಯಾನ್ಸ್ ಸಂಸ್ಥೆಯ ಡ್ಯಾನ್ಸ್ ಮಾಸ್ಟರ್ ಅವತಾರ್ ಪ್ರವೀಣ್ ಅವರ ನೇತೃತ್ವದಲ್ಲಿ ಮೇ 1 ರಿಂದ ಪ್ರಾರಂಭವಾಗಿರುವ ಈ ಶಿಬಿರವು ಚಾಮರಾಜನಗರ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಪ್ರತ್ಯೇಕವಾಗಿ ನಡೆಯುತ್ತಿದೆ. ಶಿಬಿರದಲ್ಲಿ ಮೂಲ ಜನಪದ ನೃತ್ಯ ಕಲೆಗಳಾದ ಬೀಸು ಕಂಸಾಳೆ, ಡೊಳ್ಳು ಕುಣಿತ, ಕೋಲಾಟ, ಯಕ್ಷಗಾನ, ಗೊರವರ ಕುಣಿತ, ಪಟಾ ಕುಣಿತ, ವೀರಗಾಸೆ, ಗಾರುಡಿ ಗೊಂಬೆ, ಗೋರುಕನ ನೃತ್ಯ, ಹುಲಿ ಕುಣಿತ, ಕೊಡವ ನೃತ್ಯ ಹಾಗೂ ಇನ್ನೂ ಮುಂತಾದ ಜಾನಪದ ಕಲೆಗಳನ್ನು ಕಲಿಸಿಕೊಡಲಾಗುತ್ತದೆ. ಇದರ ಜತೆಗೆ ಜಾನಪದ ನೃತ್ಯಗಳಿಂದ ಕಂಡುಕೊಳ್ಳಬಹುದಾದ ಮಾನಸಿಕ ಸ್ಥಿರತೆ, ಸದೃಢ ಮತ್ತು ಆರೋಗ್ಯಕರವಾದ ದೇಹವನ್ನು ಹೇಗೆ ಹೊಂದಬಹುದು ಎಂಬುದರ ಕುರಿತು ತರಬೇತಿ ನೀಡಲಾಗುತ್ತದೆ. ಅದರಂತೆ ಅವತಾರ್ ಗಿನ್ನಿಸ್ ದಾಖಲೆ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ.

ಗಿನ್ನಿಸ್ ದಾಖಲೆ ಪ್ರಯತ್ನ:

ಸುಮಾರು ಒಂದು ತಿಂಗಳು ಕಾಲ ನಡೆಯುವ ಈ ಶಿಬಿರದಲ್ಲಿ ಜಾನಪದ ನೃತ್ಯಗಳ ಬಗ್ಗೆ ತರಬೇತಿ ನೀಡಿ, 1000 ಕ್ಕೂ ಅಧಿಕ ಶಿಬಿರಾರ್ಥಿಗಳಿಂದ ಇಂಡಿಯಾ ಬುಕ್ ಆ್ ರೆಕಾರ್ಡ್ ಹಾಗೂ ಗಿನ್ನಿಸ್ ದಾಖಲೆಗಾಗಿ ಸತತ 1 ಗಂಟೆಗಳ ಕಾಲ ವಿವಿಧ ಜಾನಪದ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸುವ ಪ್ರತಿ ನೃತ್ಯಪಟುಗಳಿಗೂ ಪದಕ ಹಾಗೂ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಗುತ್ತದೆ. ಅದಲ್ಲದೇ ಶಿಬಿರದಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಮೂರು ತಾಲೂಕಿನಿಂದ ಸುಮಾರು 30 ವಿದ್ಯಾರ್ಥಿಗಳಿಗೆ ನೃತ್ಯ ಶಾಲೆಯಲ್ಲಿ ತರಬೇತಿ ಪಡೆಯಲು ಉಚಿತ ಅವಕಾಶವನ್ನು ನೀಡಲಾಗುತ್ತಿದೆ.

ಮೇ 31 ರಂದು ಸಮಾರೋಪ:

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 31 ರಂದು ನಡೆಯಲಿರುವ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ದಾಖಲೆಯ ನೃತ್ಯ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಸಿನಿಮಾ ತಾರೆಯರು ಸಾಕ್ಷಿಯಾಗಲಿದ್ದಾರೆ ಎಂಬುದು ವಿಶೇಷವಾಗಿದೆ. ಈ ಮೂಲಕ ಅವತಾರ್ ಪ್ರವೀಣ್ ನೃತ್ಯದ ಮೂಲಕ ಜಿಲ್ಲೆಯಲ್ಲಿ ಮೈಲುಗಲ್ಲು ಸಾಧಿಸಲು ಮುಂದಾಗಿದ್ದಾರೆ.

ಅವತಾರ್ ನೃತ್ಯ ಸಂಸ್ಥೆ ಈಗಾಗಲೇ ಹಲವಾರು ಸಾಧನೆಗಳನ್ನು ಮಾಡಿದೆ. ಈ ಶಾಲೆಯ ಮಕ್ಕಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಜಾನಪದ ಅವತಾರ ಬೇಸಿಗೆ ಶಿಬಿರದ ಮೂಲಕ ಮತ್ತೊಂದು ಸಾಧನೆಗೆ ಪ್ರಯತ್ನ ಮಾಡುತ್ತಿದ್ದೇವೆ.

-ಅವತಾರ್ ಪ್ರವೀಣ್, ಡ್ಯಾನ್ಸ್ ಮಾಸ್ಟರ್, ಚಾ.ನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net