

ಆಳಂದ: ನಮ್ಮ ದುರಾಸೆಯಿಂದ ಅರಣ್ಯ ನಾಶವಾಗುತ್ತಿದೆ, ಹೀಗಾಗಿಯೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮರಗಳನ್ನು ನೆಡುವುದರಿಂದ ಮಣ್ಣಿನ ಸವೆತ ತಪ್ಪಲಿದ್ದು, ಜಾಗತಿಕ ತಾಪಮಾನವೂ ಕಡಿಮೆಯಾಗಲಿದೆ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ವಿಭಾಗ, ತಾಲೂಕು ಪಂಚಾಯಿತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ಹಮ್ಮಿಕೊಂಡಿದ್ದ ವನ ಮಹೋತ್ಸವ-೨೦೨೩ ಮತ್ತು ಸಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮರಗಳ ನಾಶದಿಂದಾಗಿ ದೇಶದಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಮಳೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಮುಂಗಾರು ಬಿತ್ತನೆ ಸರಿಯಾಗಿ ಆಗದೆ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ನಿಸರ್ಗ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ, ಆದರೆ ದುರಾಸೆಗಳನ್ನಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅರಣ್ಯ ಉಳಿಸುವುದು ಹಾಗೂ ಬೆಳೆಸುವ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಭೂಮಿಯಲ್ಲಿ ಅಂತರ್ಜಲಮಟ್ಟ ಕುಸಿದಿದ್ದು, ೨೦೦೦ ಫೀಟ್‌ಗೂ ಹೆಚ್ಚು ಆಳಕ್ಕೆ ಹೋದರೂ ನೀರು ಸಿಗುತ್ತಿಲ್ಲ. ಎಲ್ಲ ಕೆಲಸವನ್ನು ಸರ್ಕಾರ ಮಾಡಲು ಆಗುವುದಿಲ್ಲ. ಸಮಾಜದಲ್ಲಿ ಪೂಜ್ಯನೀಯ ಸ್ಥಾನದಲ್ಲಿರುವ ಮಠಾಧೀಶರು, ಸ್ಥಳೀಯ ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು ಪರಿಣಾಮಕಾರಿಯಾಗಿ ಸಾಥ್ ನೀಡಿದಾಗಲೇ ಅರಣ್ಯ ಸಂಪತ್ತು ಉಳಿಯಲು ಸಾಧ್ಯ ಎಂದರು.
ಶ್ರೀ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಶ್ರೀ ಡಾ. ಶಂಭುಲಿಂಗ ಶಿವಾಚಾರ್ಯರು, ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಶ್ರೀ ಮುರುಘೇಂದ್ರ ಸ್ವಾಮೀಜಿ, ಶ್ರೀ ನೀಲಕಂಠ ಶಿವಾಚಾರ್ಯರು, ಶ್ರೀ ರೇಣುಕಾ ಶಿವಾಚಾರ್ಯರು, ಶ್ರೀ ಶಾಂತವೀರ ಶಿವಾಚಾರ್ಯರು, ಶ್ರೀ ಅಭಿನವ ಶಿವಬಸವ ಸ್ವಾಮೀಜಿ, ಶ್ರೀ ಶಿವಲಿಂಗ ಸ್ವಾಮೀಜಿ, ಶ್ರೀ ಶಂಭು ಸೋಮನಾಥ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಭಾವಿಕಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ಹೇಮಾ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಪ್ರಮುಖರಾದ ಗುರುಶರಣ ಪಾಟೀಲ್ ಕೋರಳ್ಳಿ, ಈರಣ್ಣ ಝಳಕಿ, ರಾಜಶೇಖರ ಯಂಕAಚಿ, ಸಂತೋಷ ದೊಡ್ಡಮನಿ, ರವೀಂದ್ರ ಕಂಠೆಕೋರೆ, ಮಲ್ಲಿಕಾರ್ಜುನ ಸಾರವಾಡ, ವೈಜನಾಥ ಝಳಕಿ ಹಾಗೂ ಸುಮಾರು ೭೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿವಕುಮಾರ ಮಾಳಿ ಸ್ವಾಗತಿಸಿದರು. ಡಾ. ರಾಜಕುಮಾರ ಹಿರೇಮಠ ನಿರೂಪಣೆ ಮಾಡಿ ವಂದಿಸಿದರು.
ಸಮಾಜದಲ್ಲಿ ಮಠಾಧೀಶರಿಗೆ ಗೌರವ ಸ್ಥಾನವಿದ್ದು, ಪ್ರತಿ ಮಠಕ್ಕೂ ಸಸಿಗಳನ್ನು ಪೂರೈಸಲಾಗುವುದು. ಶ್ರೀಗಳು ತಮ್ಮ ಭಕ್ತ ಸಮೂಹಕ್ಕೆ ಸಸಿಗಳು ವಿತರಿಸಿ, ಗಿಡಗಳನ್ನು ಬೆಳೆಸುವಂತೆ ಮಾರ್ಗದರ್ಶನ ಮಾಡಬೇಕು. ಗುರುಗಳ ಮಾತನ್ನು ಭಕ್ತರು ಸದಾ ಪಾಲಿಸುತ್ತಾರೆ. ಇದರಿಂದ ಅರಣ್ಯ ಬೆಳೆಯುತ್ತದೆ.
| ಬಿ.ಆರ್.ಪಾಟೀಲ್, ಶಾಸಕ