

ಚಾಮರಾಜನಗರ: ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ, ಜಿಲ್ಲೆಯು ಅತಿ ಹೆಚ್ಚು ಗಿಡಗಳನ್ನು ನೆಡುವ ವಿಭಾಗದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ.
ರಾಜ್ಯ ಸರ್ಕಾರವು ಕಳೆದ ಸೆ.15 ರಂದು ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಮಾನವ ಸರಪಳಿ ಹಾಗೂ ಐದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಜಿಲ್ಲೆಗಳಿಗೆ ಐದು ವಿಭಾಗಗಳಲ್ಲಿ ತಲಾ ಮೂರು ಪ್ತಶಸ್ತಿಗಳನ್ನು ನೀಡಲು ತೀರ್ಮಾನಿಸಲಾಗಿತ್ತು. ಮಾನವ ಸರಪಳಿ ನಾವೀನ್ಯತೆ,ಅತ್ಯಂತ ಉದ್ದದ ಮಾನವ ಸರಪಳಿ, ಅತಿ ಹೆಚ್ಚು ಗಿಡಗಳನ್ನು ನೆಡುವುದು,ಅತಿ ಹೆಚ್ಚು ಸ್ವಯಂಸೇವಾ ಸಂಘಗಳ ಭಾಗವಹಿಸುವಿಕೆ ಹಾಗೂ ಅತಿ ಹೆಚ್ಚು ಖಾಸಗಿ ಕಂಪನಿಗಳ ಭಾಗವಹಿಸುವಿಕೆ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ಈ ಐದು ವಿಭಾಗಗಳ ಪೈಕಿ ಅತಿ ಹೆಚ್ಚು ಗಿಡಗಳನ್ನು ನೆಡುವ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆ ಇಡೀ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದು ಗಮನ ಸೆಳೆದಿದೆ. ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನ.26 ರಂದು ಆಯೋಸಿರುವ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ವಿತರಿಸಲಿದ್ದು, ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಪ್ರಶಸ್ತಿ ಸ್ವೀಕರಿಸಲು ಆಹ್ವಾನಿಸಲಾಗಿದೆ.
ಸೆ.15 ರಂದು ಅಂತರಾಷ್ಟೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಅತಿಹೆಚ್ಚು ಗಿಡಗಳನ್ನು ನೆಡುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಅತ್ಯಂತ ಹೆಮ್ಮೆ ಎನಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲಾ ಅಧಿಕಾರಿ ವರ್ಗ ಹಾಗೂ ಸಂಘ-ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೇ ಪರಿಸರ ಕಾಳಜಿಯನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ರಾಷ್ಟ್ರದಲ್ಲಿ ಹೆಸರು ಮಾಡುವಂತಾಗಲಿ.
ಸಿ.ಎಂ.ವೆಂಕಟೇಶ್, ಪರಿಸರ ಪ್ರೇಮಿ, ಚಾಮರಾಜನಗರ