ಗಿಡ ನೆಟ್ಟು ಪೋಷಿಸಿ

mdg green
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಸಿರು ಫೌಂಡೇಷನ್‌ನಿಂದ ಗಿಡ ನೆಡಲಾಯಿತು. ರತನ್ ಊರುಬಗೆ, ಪ್ರಸನ್ನಕುಮಾರ್, ರಕ್ಷಿತಾ, ಎಂ.ಎನ್.ಅಶ್ವತ್ಥ್, ಶಿವಶಂಕರ್, ಹರೀಶ್, ಮಮತಾ, ತಸ್ಲಿಮಾ ಬೇಗಂ, ವಿನುಪ್ರಸಾದ್ ಇತರರಿದ್ದರು.
Published on

ಮೂಡಿಗೆರೆ: ಗಿಡ ನೆಟ್ಟು ಹೋದರೆ ಸಾಲದು. ಗಿಡವನ್ನು ಪೋಷಿಸಬೇಕು. ಜಾನುವಾರುಗಳು ನಾಶ ಮಾಡದಂತೆ ಗಿಡಗಳನ್ನು ರಕ್ಷಿಸಬೇಕು. ಬೇಸಿಗೆಯಲ್ಲಿ ನೀರು ಹಾಯಿಸಿದರೆ ಮಾತ್ರ ಗಿಡಗಳ ಬೆಳವಣಿಗೆ ಸಾಧ್ಯ. ಗಿಡಗಳನ್ನು ನೆಟ್ಟು ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆಗೆ ಶುದ್ಧ ಪರಿಸರ ದೊರೆಯಲಿದೆ ಎಂದು ಹಸಿರು ಫೌಂಡೇಷನ್ ಅಧ್ಯಕ್ಷ ರತನ್ ಊರುಬಗೆ ಹೇಳಿದರು.

ಹಸಿರು ಫೌಂಡೇಷನ್ ಕೈಗೊಂಡಿರುವ ವಾರ್ಷಿಕ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ಘಟ್ಟದಹಳ್ಳಿ, ಮಾಕೋನಹಳ್ಳಿ ಪ್ರೌಢಶಾಲೆ, ನಂದೀಪುರ ಮತ್ತು ಗೌರಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿ, ಗಿಡಗಳಿಂದಾಗುವ ಪ್ರಯೋಜನಗಳ ಕುರಿತು ಮಕ್ಕಳಿಗೆ ಶಾಲಾ ಹಂತದಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ಶಾಲೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಹಿಂದೆ ನೈಸರ್ಗಿಕವಾದ ಶುದ್ಧ ಪರಿಸರವಿತ್ತು. ಈಗ ಅವೆಲ್ಲವೂ ಕಣ್ಮರೆಯಾಗಿದೆ. ಗಿಡ ಮರಗಳನ್ನು ಕತ್ತರಿಸುವವರ ಸಂಖ್ಯೆ ಹೆಚ್ಚಾಗಿದೆ. ನೆಟ್ಟು ಬೆಳೆಸುವವರು ಕಡಿಮೆಯಾಗಿದ್ದಾರೆ. ತೋರಿಕೆಗೆ ಗಿಡಗಳನ್ನು ನೆಟ್ಟು ಹೋದ ನಂತರ ತಿರುಗಿಯೂ ನೋಡದೆ ಸಾವಿರಾರು ಗಿಡಗಳು ನಾಶವಾಗಿವೆ. ಗಿಡಗಳನ್ನು ನೆಟ್ಟು ಪೋಷಿಸುವ ಗುಣ ಹೊಂದಿರಬೇಕು ಎಂದು ಹೇಳಿದರು.

ಮಾಕೋನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷೆ ರಕ್ಷಿತಾ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವತ್ಥ್, ಅರಣ್ಯ ಇಲಾಖೆ ಅಧಿಕಾರಿ ಶಿವಶಂಕರ, ಮುಖ್ಯಶಿಕ್ಷಕ ಹರೀಶ್, ಶಿಕ್ಷಕರಾದ ಮಮತಾ, ತಸ್ಲಿಮಾ ಬೇಗಂ, ರಾಜು, ಆಲಿಶ್, ವೀಣಾ, ಗ್ರಾಮಸ್ಥರಾದ ವೆಂಕಟೇಶ್, ಸತೀಶ್, ಧರ್ಮೇಶ್, ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್, ಆದೀಪ್, ಶೋಧನ್, ಸುಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net