ಗಾಳಿಮಳೆಗೆ ನೆಲಕಚ್ಚಿದ ೮೦೦ ವಿದ್ಯುತ್ ಕಂಬಗಳು

rain dameg
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ೧ವಾರದಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸುಮಾರು ೮೦೦ ವಿದ್ಯುತ್ ಕಂಬಗಳು ಹಾನಿಯಾಗಿದೆ ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರ ರಾಮಚಂದ್ರ ಅವರು ತಿಳಿಸಿದ್ದಾರೆ.

ಮರಗಳು ಹಾಗೂ ಮರದ ರೆಂಬೆಕೊಂಬೆಗಳು ಮುರಿದು ಬಿದ್ದ ಪರಿಣಾಮ ಅಪಾರ ಪ್ರಮಾಣದಲ್ಲಿ ವಿದ್ಯುತ್ ಮಾರ್ಗಗಳಿಗೆ ಹಾನಿ ಉಂಟಾಗಿದೆ. ಬಹುತೇಕ ಎಲ್ಲಾ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿರುತ್ತದೆ. ಮಡಿಕೇರಿ ಹಾಗೂ ಸೋಮವಾರ ಪೇಟೆ ತಾಲೂಕಿನ ಬಹುತೇಕ ಕಡೆ ಬೀಸುತ್ತಿರುವ ವಿಪರೀತ ಗಾಳಿಯಿಂದ ಸೆಸ್ಕ್ ಇಲಾಖೆಯ ಸಿಬ್ಬಂದಿಯವರಿಗೆ ದುರಸ್ತಿ ಕೆಲಸ ನಿರ್ವಹಿಸಲು ತೀರಾ ಹಿನ್ನಡೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಕೆಲವೊಂದು ಪ್ರದೇಶಗಳಲ್ಲಿ ಐದಾರು ದಿನಗಳಿಂದ ವಿದ್ಯುತ್ ಮರುಜೋಡಣೆ ಬಾಕಿ ಇದ್ದು, ಚೆಸ್ಕಾಂ ವತಿಯಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ವಿದ್ಯುತ್ ಮರುಜೋಡಣೆ ಮಾಡಲು ಪ್ರಯತ್ನಿಸಲಾಗುವುದು ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.

ಮುಂದುವರೆದ ಸಾಧಾರಣ ಮಳೆ: ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ ಮುಂದುವರೆದಿದೆ. ಬುಧವಾರ ಮಡಿಕೇರಿ ತಾಲೂಕಿನ ಗಾಳಿಬೀಡು, ಮದೆನಾಡು, ಮೇಕೇರಿ, ತಾಳತ್ತಮನೆ ಸೇರಿದಂತೆ ವಿವಿಧೆಡೆ ಗಾಳಿಮಿಶ್ರಿತ ಸಾಧಾರಣ ಮಳೆಯಾಗಿದೆ. ಮಂಗಳವಾರ ರಾತ್ರಿ ಸುರಿದ ಗಾಳಿ ಮಳೆಗೆ ಮಡಿಕೇರಿ-ಚೆಟ್ಟಳ್ಳಿ ರಸ್ತೆಯ ಅಬ್ಯಾಲ ಫಾಲ್ಸ್ ಹತ್ತಿರ ಮರ ಬಿದ್ದು ರಸ್ತೆ ಬಂದ್ ಆಗಿತ್ತು. ಸ್ಥಳಕ್ಕೆ ದಾವಿಸಿದ ಸ್ಥಳೀಯರು, ಸೆಸ್ಕ್ ಸಿಬ್ಬಂದಿಗಳ ನೆರವಿನಿಂದ ಮರ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೧೬.೬೬ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨೧.೧೦ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೮.೭೫ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೬.೧೫ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೨೪.೮೦ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೨೨.೫೦ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೩೪, ನಾಪೋಕ್ಲು ೧೭.೪೦, ಸಂಪಾಜೆ ೮, ಭಾಗಮಂಡಲ ೨೫, ವಿರಾಜಪೇಟೆ ೯, ಅಮ್ಮತ್ತಿ ೮.೫೦, ಹುದಿಕೇರಿ ೭.೬೦, ಶ್ರೀಮಂಗಲ ೬, ಪೊನ್ನಂಪೇಟೆ ೮.೦೦, ಬಾಳೆಲೆ ೩, ಸೋಮವಾರಪೇಟೆ ೩೦.೬೦, ಶನಿವಾರಸಂತೆ ೧೭, ಶಾಂತಳ್ಳಿ ೪೦, ಕೊಡ್ಲಿಪೇಟೆ ೧೧.೬೦, ಕುಶಾಲನಗರ ೧೪.೮೦, ಸುಂಟಿಕೊಪ್ಪ ೩೦.೨೦ ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯದ ಗರಿ? ಮಟ್ಟ ೨,೮೫೯ ಅಡಿಗಳಿದ್ದು, ೨೮೫೪.೪೯ ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು ೭೪೨೨ ಕ್ಯುಸೆಕ್‌ಇದ್ದು, ಹೊರ ಹರಿವು ನದಿಗೆ ೫೦೦೦ ಕ್ಯುಸೆಕ್, ನಾಲೆಗೆ ೩೫೦ ಕ್ಯುಸೆಕ್ ಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net