ಗಾಳಿ ಸಹಿತ ಮಳೆಗೆ ಬಾಳೆ ಹಾನಿ

01Rajesh4
Published on

ಚಾಮರಾಜನಗರ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಿದ್ದ ಮಳೆ, ಬೀಸಿದ ಜೋರು ಗಾಳಿಗೆ ಹಲವು ಕಡೆಗಳಲ್ಲಿ ಬಾಳೆ ನೆಲಕಚ್ಚಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ಯಳಂದೂರು ತಾಲೂಕುಗಳಲ್ಲಿ ಮಳೆಯಿಂದ ಬಾಳೆ ಬೆಳೆಗೆ ಹಾನಿಯುಂಟಾಗಿದೆ. ಸಲು ಕೊಡಬೇಕಿದ್ದ ಬೆಳೆ ಸಂಪೂರ್ಣ ನೆಲಕಚ್ಚಿ ರೈತರ ನೆಮ್ಮದಿ ಕೆಡಿಸಿದೆ. ‘ಕೃಷಿ’ ಎಂದರೆ ಮಾನ್ಸೂನ್ ಜತೆಗಿನ ಜೂಜು ಎಂದೇ ಹೇಳಲಾಗುತ್ತದೆ. ಮಳೆ ಬಾರದೆ ಇದ್ದರೆ ಬರಗಾಲ ಆವರಿಸಿ ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ. ನೀರಿನ ಅಭಾವ ಉಂಟಾಗಿ ಆಹಾರ ಉತ್ಪಾದನೆ ಕುಂಠಿತವಾಗುತ್ತದೆ. ಹಾಗೆಯೇ ಅಧಿಕ ಮಳೆಯಾದರೆ ಪ್ರವಾಹ ಬಂದು ಬೆಳೆ ಕೊಚ್ಚಿಕೊಂಡು ಹೋಗುತ್ತದೆ. ರೈತರ ಪಾಲಿಗೆ ಆಶಾದಾಯಕವಾಗಬೇಕಾದ ಮಳೆಯ ಕಣ್ಣಾಮುಚ್ಚಾಲೆಯಿಂದಲೇ ಕೃಷಿನಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಅಡಗಿದೆ. ಪ್ರಸ್ತುತ ಬಿರುಬಿಸಿಲಿನ ನಡುವೆಯೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಏರಿದ ತಾಪಮಾನ ಕಂಡುಬರುತ್ತಿದೆ. ಸಂಜೆಯಾಗುತ್ತಿದ್ದಂತೆಯೇ ಜೋರು ಗಾಳಿಯೊಂದಿಗೆ ಒಂದೆರಡು ತಾಸು ಮಳೆ ಸುರಿಯುತ್ತಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಬಾಳೆಯೂ ಒಂದು. ಬಾಳೆ ನೆಟ್ಟಿರುವ ರೈತರಿಗೆ ಮಳೆ ಕಾಟ ಕೊಡುತ್ತಿದೆ. ಗಾಳಿಯ ರಭಸಕ್ಕೆ ಗೊನೆ ನೆಲಕಚ್ಚುತ್ತಿದೆ.

ಪುಣಜನೂರಿನಲ್ಲಿ ಬಾಳೆಗೆ ಹಾನಿ:

ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಬಾಳೆ ಬೆಳೆ ಹಾನಿಯಾಗಿದೆ. ಗ್ರಾಮದ ಸಿದ್ದನಾಯ್ಕ ಅವರ 1 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಅಲ್ಲದೆ, ಗಾಳಿಯ ರಭಸಕ್ಕೆ ತಗಡಿನ ಶೀಟ್‌ಗಳು ಹಾರಿ ಹೋಗಿವೆ. ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ಸಿದ್ದನಾಯ್ಕ ಮನವಿ ಮಾಡಿಕೊಂಡಿದ್ದಾರೆ. ಪುಣಜನೂರು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಕಾಡುಪ್ರಾಣಿಗಳ ಹಾವಳಿ ಕಂಟಕವಾಗಿದೆ. ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಪುಣಜನೂರು ಮಳೆಯಾಶ್ರಿತ ಪ್ರದೇಶವಾಗಿದೆ. ಕೃಷಿಕರು ಕಾಡುಪ್ರಾಣಿಗಳನ್ನು ಬೆಳೆ ರಕ್ಷಣೆ ಮಾಡಿಕೊಳ್ಳುವ ಸವಾಲಿನ ನಡುವೆ ಮಳೆಯಿಂದ ಆಗುತ್ತಿರುವ ಹಾನಿಯನ್ನೂ ತಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.

ಗುಂಡ್ಲುಪೇಟೆಯಲ್ಲಿ ಭಾರಿ ನಷ್ಟ:

ಗುಂಡ್ಲುಪೇಟೆ ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ಸುರಿದ ಗಾಳಿ ಸಹಿತ ಮಳೆಗೆ ಅಪಾರ ಪ್ರಮಾಣದಲ್ಲಿ ಬಾಳೆ ಬೆಳೆ ನಷ್ಟ ಉಂಟಾಗಿದೆ. ಶೀಲವಂತಪುರ, ಸೋಮನಪುರ, ಕೊಡಸೋಗೆ, ಬೊಮ್ಮಲಾಪುರ, ಕಡತಾಳಕಟ್ಟೆಹುಂಡಿ, ಕುಂದಕೆರೆ, ವಡ್ಡಗೆರೆ ಮುಂತಾದ ಗ್ರಾಮಗಳಲ್ಲಿ ಜೋರಾಗಿ ಬೀಸಿದ ಗಾಳಿಗೆ ರೈತರ ಜಮೀನುಗಳಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಾಳೆ ಗಿಡಗಳು, ಗಿಡಮರಗಳು ನೆಲಕಚ್ಚಿದ್ದವು. ಕೊಡಸೋಗೆ ಗ್ರಾಮದ ಎಲ್.ಮಹದೇವಸ್ವಾಮಿ, ಗುರು, ನಾಗಮಲ್ಲಪ್ಪ, ಕೊಂಗಳ್ಳಯ್ಯ, ಕೊಂಗಳ್ಳಶೆಟ್ಟಿ. ಸುಬ್ಬಪ್ಪ, ಪ್ರಕಾಶ್, ಕುಂದಕೆರೆ ಸ್ವಾಮಿ ಎಂಬುವರ ಜಮೀನುಗಳಲ್ಲಿ ಬೆಳೆದಿದ್ದ 30 ಸಾವಿರಕ್ಕೂ ಅಧಿಕ ಬಾಳೆ ನೆಲಕ್ಕುರುಳಿವೆ. ಕೆಲವೇ ದಿನಗಳಲ್ಲಿ ಕಟಾವಿಗೆ ಬರಲಿದ್ದ ಬಾಳೆ ನೆಲಕಚ್ಚಿದ ಪರಿಣಾಮ ಪ್ರತಿಯೊಬ್ಬ ರೈತನಿಗೂಸ ಲಕ್ಷಾಂತರ ರೂ.ಗಳ ಬೆಳೆನಷ್ಟ ಸಂಭವಿಸಿದೆ.

ಪರಿಹಾರ ಶೀಘ್ರ ವಿತರಣೆಯಾಗಲಿ:

ಮಳೆಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಜಿಲ್ಲಾಡಳಿತದಿಂದ ತ್ವರಿತಗತಿಯಲ್ಲಿ ಪರಿಹಾರ ವಿತರಣೆಯಾಗಬೇಕಿದೆ. ಪರಿಹಾರ ವಿತರಣೆಯಲ್ಲಿ ವಿಳಂಬವಾದರೆ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಕೆಡುತ್ತದೆ. ಸಕಾಲದಲ್ಲಿ ನಷ್ಟಕ್ಕೆ ಪರಿಹಾರ ದೊರೆಯುವುದರಿಂದ ಕಷ್ಟದ ಕಾಲದಲ್ಲಿ ಆರ್ಥಿಕ ನೆರವು ದೊರೆತಂತಾಗುತ್ತದೆ. ಅಲ್ಲದೆ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರವನ್ನೂ ಒದಗಿಸಿಕೊಡಬೇಕಿದೆ.

ಮಳೆಯಿಂದ ಹಲವೆಡೆ ಹಾನಿ: ಚಾಮರಾಜನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದೆ. ಚಾಮರಾಜನಗರದಿಂದ ಕೋಳಿಪಾಳ್ಯಕ್ಕೆ ಹೋಗುವ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯ ಆರ್ಭಟಕ್ಕೆ ಮರ ಬಿದ್ದು ಹೋಗಿತ್ತು. ಪೂರ್ವ ಠಾಣೆ ಪೊಲೀಸರು ಮರವನ್ನು ತೆರವುಗೊಳಿಸಿದರು. ಎರಡ್ಮೂರು ದಿನಗಳ ಹಿಂದೆ ಸುರಿದ ಮಳೆಯಿಂದ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿರುವ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದ ಮುಂಭಾಗ ನೀರು ನಿಂತುಕೊಂಡಿತ್ತು. ಕೃಷಿ ಇಲಾಖೆ ಕಚೇರಿ ಬಳಿ ಮರ ಬಿದ್ದು ಹೋಗಿತ್ತು.

ಬೆಳೆ ವಿಮೆಯ ನೀತಿಯನ್ನು ಬದಲಾಯಿಸಬೇಕು. ರೈತನ ಹೊಲದಲ್ಲಿನ ಬೆಳೆಗಳಿಗೆ ವಿಮೆಯಾಗಬೇಕು. ಆಗ ಮಾತ್ರ ಮಳೆಯಿಂದ ನಷ್ಟ ಉಂಟಾದಾಗ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿಮೆ ಕಂಪನಿಗಳಿಂದ ಅನುಕೂಲವಾಗಲಿದೆ. ರೈತರಿಗೆ ನಷ್ಟ ಉಂಟಾಗುವ ಸನ್ನಿವೇಶಗಳನ್ನು ಅರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆವರ್ತ ನಿಧಿಯನ್ನು ಶೇಖರಣೆ ಮಾಡಿಟ್ಟು ಒಂದು ವಾರದೊಳಗೆ ಬೆಳೆ ನಷ್ಟದ ವೈಜ್ಞಾನಿಕ ಪರಿಹಾರವನ್ನು ಒದಗಿಸಿಕೊಟ್ಟರೆ ಕೃಷಿ ಉಳಿಯಲಿದೆ. ಇಲ್ಲದಿದ್ದರೆ ರೈತರು ಕೃಷಿಯಿಂದ ವಿಮುಖರಾಗುತ್ತಾರೆ. ಕಳೆದ ಸಲ ಬಾಳೆ ಬೆಳೆಗಾರರಿಗೆ ನಷ್ಟ ಪರಿಹಾರ ನೀಡಬೇಕೆಂದು ಚಾಮರಾಜನಗರ ಮತ್ತು ಮೈಸೂರಿನಲ್ಲಿ ಸಾಕಷ್ಟು ಹೋರಾಟ ಮಾಡಿದ್ದೆವು. ಆದರೂ ಕೂಡ ಬೆರಳೆಣಿಕೆಯಷ್ಟು ರೈತರಿಗೆ ಡಿಬಿಟಿ, ಬೆಳೆ ದೃಢೀಕರಣ ಮಾಡಿದವರಿಗೆ ಪರಿಹಾರ ದೊರೆಯಿತು. ಈ ಸಲ ಈ ರೀತಿ ಆಗಬಾರದು. ಬೆಳೆ ನಷ್ಟ ಅನುಭವಿಸಿರುವ ಎಲ್ಲ ರೈತರಿಗೂ ಪರಿಹಾರ ದೊರೆಯಬೇಕು. ಹಳ್ಳಿಕೆರೆಹುಂಡಿ ಭಾಗ್ಯರಾಜ್, ರೈತ ನಾಯಕ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net