

ಚಿತ್ರದುರ್ಗ: ಜಿಲ್ಲೆಯ ಬೊಮ್ಮೇನಹಳ್ಳಿಯಲ್ಲಿ ಮೊಹರಂ ಆಚರಣೆ ಅಂಗವಾಗಿ ಭಾನುವಾರ ಕೆಂಡ ಹಾಯುವ ವೇಳೆ ಮುಗ್ಗರಿಸಿ ಬಿದ್ದ ರಮೇಶ್ ಎಂಬಾತನ ಜತೆಗಿದ್ದ 2 ವರ್ಷದ ಬಾಲಕ ರವಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ.
ದೇಹದ 25 ಕಡೆ ಇಬ್ಬರಿಗೂ ಸುಟ್ಟ ಗಾಯಗಳಾದ ಕಾರಣ ಬೆಳಗ್ಗೆ 6ಕ್ಕೆ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ವೈದ್ಯರು, ಸಿಬ್ಬಂದಿ ನರಳುತ್ತಿರುವ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡದೆ ಅಮಾನವೀಯ ವರ್ತನೆ ತೋರಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ವಿಷಯ ತಿಳಿದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ, ಟಿ.ರಘುಮೂತಿ, ಕರ್ತವ್ಯ ಲೋಪ ಎಸಗಿದ ವೈದ್ಯರು, ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.
ಆರೋಗ್ಯ ಸಚಿವರ ಗಮನಕ್ಕೆ ತಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜು, ಡ್ಯೂಟಿ ಡಾಕ್ಟರ್ ಅನೂಪಾ ಇಬ್ಬರನ್ನು ಅಮಾನತುಗೊಳಿಸುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ಡಿ.ಸುಧಾಕರ್ ತಿಳಿಸಿದರು.
ಡಿಎಚ್‌ಒ ಡಾ. ಆರ್.ರಂಗನಾಥ್ ಇದ್ದರು.
ಪಾಲಕರಿಂದಲೇ ಮಗುವಿಗೆ ಡ್ರೆಸ್ಸಿಂಗ್
ಸುಟ್ಟ ಗಾಯಗಳಾದ ಮಗುವಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ವೈದ್ಯರು, ಸಿಬ್ಬಂದಿ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಕುಟುಂಬ ಸದಸ್ಯರಿಂದಲೇ ಮಗುವಿಗೆ ಡ್ರೆಸ್ಸಿಂಗ್ ಮಾಡಿಸಿದ ಸಿಬ್ಬಂದಿ ವಿರುದ್ಧವೂ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ಬಯೋಮೆಟ್ರಿಕ್ ಹಾಕಿ ಕರ್ತವ್ಯದಿಂದ ನುಣುಚಿಕೊಂಡ ಆರೋಪ ಕೂಡ ವೈದ್ಯರ ಮೇಲೆ ಕೇಳಿಬಂದಿದೆ. ಮೊಬೈಲ್ ಕರೆಗೂ ಜಿಲ್ಲಾ ಶಸ್ತ್ರಚಿಕಿತ್ಸಕರು, ಕರ್ತವ್ಯ ವೈದ್ಯರು ಸ್ಪಂದಿಸಿಲ್ಲ ಎಂದು ದೂರಿದ್ದಾರೆ.