ಗಾಯಾಳು ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವ

h20-nagesh
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ನಡೆಸಿದ ಅಮಾನವೀಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಅತಿಥಿ ಶಿಕ್ಷಕಿ ಗೀತಾ ಯಲ್ಲಪ್ಪ ಅವರನ್ನು ನಗರದ ಕಿಮ್್ಸ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ ಮಂಗಳವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಗಾಯಾಳು ಶಿಕ್ಷಕಿಯ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದ ಸಚಿವರು, ಶಿಕ್ಷಕಿಯ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಕುರಿತು ವೈದ್ಯರಿಂದ ಮಾಹಿತಿ ಪಡೆದರು.

ಅತಿಥಿ ಶಿಕ್ಷಕ ಆರೋಪಿ ಮುತ್ತಪ್ಪ ಹಡಗಲಿ, ಶಾಲೆಯ 4ನೇ ತರಗತಿ ವಿದ್ಯಾರ್ಥಿ ಭರತ್ ಮೇಲೆ ಸೋಮವಾರ ಬೆಳಗ್ಗೆ ಹಲ್ಲೆ ನಡೆಸಿ, ಒಂದನೇ ಮಹಡಿಯಿಂದ ಕೆಳಗೆ ತಳ್ಳಿದ್ದ. ಬಳಿಕ ಶಿಕ್ಷಕಿ ಗೀತಾ ಯಲ್ಲಪ್ಪ ಅವರ ಮೇಲೂ ಸಲಾಕೆಯಿಂದ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಭರತ್ ಮೃತಪಟ್ಟಿದ್ದಾನೆ. ಶಿಕ್ಷಕಿ ಗೀತಾ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್​ಗೆ ದಾಖಲಿಸಲಾಗಿದೆ. ಪರಾರಿಯಾಗಿರುವ ಆರೋಪಿ ಶಿಕ್ಷಕನ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಶಾಲೆಯಲ್ಲಿ ನಡೆದಿರುವ ಈ ಘಟನೆ ಅತ್ಯಂತ ದುರದೃಷ್ಟಕರ. ಘಟನೆಯಿಂದ ಆತಂಕಗೊಂಡಿರುವ ಶಾಲಾ ಮಕ್ಕಳು ಮತ್ತು ಶಿಕ್ಷಕರಿಗೆ ಕೌನ್ಸೆಲಿಂಗ್ ಮಾಡಿ ಧೈರ್ಯ ತುಂಬಲಾಗುವುದು. ಕಾರಣ ಏನೆಂಬುದು ಆರೋಪಿಯ ಬಂಧನದ ಬಳಿಕ ತಿಳಿದು ಬರಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಬಿ.ಸಿ. ನಾಗೇಶ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net