ಚಾಮರಾಜನಗರ: ನಗರದ ರೈಲು ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿತದಲ್ಲಿ ಸಿಲುಕಿ ರಕ್ಷಿಸಲ್ಪಟ್ಟಿದ್ದ ಕಾರ್ಮಿಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ಶನಿವಾರ ಜಿಲ್ಲಾಸ್ಪತ್ರೆಗೆ ಸೇರಿಸಿದರು.
ಹುಬ್ಬಳ್ಳಿ ಮೂಲದ ಕಾರ್ಮಿಕ ಅಬ್ದುಲ್ ರಜಾಕ್(43) ಗಾಯಾಳು. ನಗರದಲ್ಲಿ ರೈಲು ನಿಲ್ದಾಣದ ಕಾಮಗಾರಿ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜೆಸಿಬಿಯಲ್ಲಿ ತೋಡಿದ್ದ ದೊಡ್ಡ ಹಳ್ಳದಲ್ಲಿ ಅಬ್ದುಲ್ ರಜಾಕ್ ಕುಳಿತು ಕಬ್ಬಿಣದ ಕೆಲಸ ಮಾಡುತ್ತಿದ್ದ. ಈ ವೇಳೆ ಮಣ್ಣು ಕುಸಿದಿದೆ. ಇದನ್ನು ಗಮನಿಸಿದವರೊಬ್ಬರು ಅಗ್ನಿಶಾಮಕದಳಕ್ಕೆ ಕರೆ ಮಾಡಿ ಕಾಮಗಾರಿ ಭೂಮಿ ಕುಸಿದಿರುವ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳುವಷ್ಟರಲ್ಲಿ ಅಲ್ಲಿನ ಉಳಿದ ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿದ್ದ ಅಬ್ದುಲ್ ರಜಾಕ್‌ನನ್ನು ರಕ್ಷಣೆ ಮಾಡಿದ್ದಾರೆ. ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ ಸಿಬ್ಬಂದಿ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.