ಗಾಯದ ಮೇಲೆ ಬರೆ ಎಳೆದ ಸರ್ಕಾರ

apmc1
Published on

ಹಾವೇರಿ: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿದ್ದರೆ ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುತ್ತಿರಲಿಲ್ಲ. ಕಾಯ್ದೆಯ ಕುರಿತು ಅಧಿವೇಶನದಲ್ಲಿ ಸಾಧಕ, ಬಾಧಕದ ಚರ್ಚೆ ನಡೆಸದೆಯೇ, ರೈತರಿಂದ ಅಭಿಪ್ರಾಯ ಸಂಗ್ರಹಿಸದೇ ಏಕಾಏಕಿ ಕಾಯ್ದೆ ಜಾರಿಗೊಳಿಸಿದ್ದು ಸರಿಯಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ದೂರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಸಂಶಯ ಮೂಡುತ್ತಿದೆ. 2017ರಲ್ಲಿ ಕಾಂಗ್ರೆಸ್ ಸರ್ಕಾರ ಈ ಕಾಯ್ದೆ ಜಾರಿಗೆ ತರಲು ಉದ್ದೇಶಿಸಿದಾಗ ವಿರೋಧ ವ್ಯಕ್ತವಾಗಿತ್ತು. ಈಗ ಲಾಕ್​ಡೌನ್ ಸಂದರ್ಭದಲ್ಲಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದನ್ನು ರೈತ ಸಂಘ ಬಲವಾಗಿ ಖಂಡಿಸುತ್ತದೆ’ ಎಂದರು.

ಕಾಯ್ದೆ ತಿದ್ದುಪಡಿಯಿಂದ ಮಾರುಕಟ್ಟೆ ವ್ಯವಸ್ಥೆ ಬಹುರಾಷ್ಟ್ರೀಯ ಕಂಪನಿಗಳ ಹಿಡಿತಕ್ಕೆ ಸಿಗಲಿದ್ದು, ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ. ಹೀಗಾಗಿ, ಇನ್ನೊಮ್ಮೆ ಪರಾಮರ್ಶೆ ನಡೆಸಿ ರೈತರಿಗೆ ಮಾರಕವಾಗಿರುವ ಅಂಶಗಳನ್ನು ಕೈಬಿಡಬೇಕು. ಎಪಿಎಂಸಿ ತನ್ನ ಅಧಿಕಾರ ಕಳೆದುಕೊಂಡು ಕಾಪೋರೇಟ್ ಕಂಪನಿಗಳು ದುರಾಡಳಿತ ನಡೆಸುವುದರಿಂದ ರೈತರಿಗೆ ಸಾಕಷ್ಟು ಹಾನಿಯಾಗಲಿದೆ. ಹೀಗಾಗಿ, ಸರ್ಕಾರ ಮರುಪರಿಶೀಲನೆ ನಡೆಸಬೇಕು ಎಂದರು.

ಕಳೆದ ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಅನೇಕರು ಮನೆ ಕಳೆದುಕೊಂಡು ವಸತಿಹೀನರಾಗಿದ್ದಾರೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿ ಸರ್ಕಾರ ಕೋಟ್ಯಂತರ ರೂ. ಪರಿಹಾರ ಬಿಡುಗಡೆ ಮಾಡಿತ್ತು. ಇದನ್ನು ಅರ್ಹ ರೈತರಿಗೆ ಹಂಚಿಕೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ, ಬೇಜವಾಬ್ದಾರಿ ವಹಿಸಿದರು. ನಷ್ಟ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆದು 7 ಜನ ಗ್ರಾಮ ಲೆಕ್ಕಾಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಯಾರ ಮೇಲೂ ಕಾನೂನು ಕ್ರಮ ಜರುಗಿಲ್ಲ. ಈಗಲಾದರೂ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ಕೂಡಲೆ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬೆಳೆ ವಿಮೆ ಹಣ ಬಿಡುಗಡೆಗೊಳಿಸಿ: 2015-16ರಿಂದ 2020ರವರೆಗೆ ವಿವಿಧ ತಾಂತ್ರಿಕ ಕಾರಣ ನೀಡಿ ಬಾಕಿ ಉಳಿಸಿಕೊಂಡಿರುವ ಬೆಳೆ ವಿಮೆ ಹಣವನ್ನು ರೈತರಿಗೆ ಕೊಡಬೇಕು. 2015-16ರಲ್ಲಿ ಅಕ್ಕಿ ಭತ್ತದ ವ್ಯತ್ಯಾಸದಿಂದ ಇನ್ನೂ 5.6 ಕೋಟಿ ರೂ. ಬಾಕಿ ಉಳಿದಿದೆ. 5 ವರ್ಷಗಳಿಂದ ಸುಮಾರು 16 ಕೋಟಿ ರೂ. ಬೆಳೆ ವಿಮೆ ಪರಿಹಾರದ ಹಣ ಬ್ಯಾಂಕ್​ನಲ್ಲಿದೆ. 2019-20ರಲ್ಲಿ ಜಿಲ್ಲೆಗೆ ಮಂಜೂರಾಗಿದ್ದ 49 ಕೋಟಿ ರೂ. ಹಣವನ್ನೂ ಜಿಲ್ಲಾಡಳಿತ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ. ಶೇ. 40ರಷ್ಟು ರೈತರಿಗೆ ವಿಮೆ ಜಮಾ ಆಗಿಲ್ಲ. ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ತಕ್ಷಣ ವಿಮೆ ಕಂಪನಿ ಹಾಗೂ ರೈತ ಮುಖಂಡರ, ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಂಡುಕೊಂಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದರು.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೊಷಿಸಿ: ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 1,63,318 ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ನೀರಾವರಿಯಲ್ಲಿ 10,698 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 10 ಲಕ್ಷ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ, ರಾಜ್ಯ ಸರ್ಕಾರ ಕೆಎಂಎಫ್ ಮೂಲಕ 20 ಸಾವಿರ ಮೆಟ್ರಿಕ್ ಟನ್ ಅನ್ನು ಸಣ್ಣ, ಅತಿಸಣ್ಣ ರೈತರಿಂದ ಖರೀದಿ ಮಾಡುವಂತೆ ಹೇಳಿ ಅನೇಕ ಷರತ್ತುಗಳನ್ನು ಹಾಕಿದೆ. ಸರ್ಕಾರ ಘೊಷಣೆ ಮಾಡಿರುವ ಬೆಂಬಲ ಬೆಲೆ 1,760 ರೂ. ಎಷ್ಟು ರೈತರಿಗೆ ಸಿಗಲು ಸಾಧ್ಯವಿದೆ? ಹಾವೇರಿ, ಗದಗ, ಧಾರವಾಡ, ಕಾರವಾರ ಸೇರಿ ಕೇವಲ 7 ಸಾವಿರ ಮೆಟ್ರಿಕ್ ಟನ್ ಖರೀದಿಸಿದರೆ ಉಳಿದ ರೈತರು ಯಾವ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಬೇಕು. ಕಾರಣ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಿ 1,760 ರೂ., ಬೆಂಬಲ ಬೆಲೆಗೆ ಜಿಲ್ಲೆಯ ಎಲ್ಲ ರೈತರ ಮೆಕ್ಕೆಜೋಳ ಖರೀದಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಯಾಡಗಿ ಎಪಿಂಎಸಿ ಅಧ್ಯಕ್ಷ ಕೆ.ಎಸ್. ನಾಯ್ಕರ, ರೈತ ಸಂಘಟನೆಯ ಪ್ರಮುಖರಾದ ಕಿರಣಕುಮಾರ ಗಡಿಗೋಳ, ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಜಾನ್ ಪುನೀತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net