ಗಾಣಿಗರಿಗೆ 2‘ಎ’ ಮೀಸಲು ಸೌಲಭ್ಯ ಬೇಕು

CTD 30 Ganiga--03
Published on

ಚಿತ್ರದುರ್ಗ: ಉತ್ತರ ಕರ್ನಾಟಕ ಭಾಗದ ಗಾಣಿಗರು 2 ‘ಎ’ ಮೀಸಲು ಸೌಲಭ್ಯ ಪಡೆಯುತ್ತಿದ್ದಾರೆ. ಅದರಂತೆ ಉಳಿದೆಡೆಗಳಲ್ಲೂ ಇದನ್ನು ಕಲ್ಪಿಸುವ ನಿಟ್ಟಿನಲ್ಲಿ ಆಯಾ ಭಾಗದ ಶಾಸಕರು ತಹಸೀಲ್ದಾರರಿಗೆ ಸೂಚಿಸಬೇಕು ಎಂದು ವಿಜಯಪುರ ಅಖಿಲ ಭಾರತ ಗಾಣಿಗ ಪೀಠದ ಶ್ರೀ ಜಯಬಸವಕುಮಾರ ಸ್ವಾಮೀಜಿ ಒತ್ತಾಯಿಸಿದರು.

ತಾಲೂಕು ಅಖಿಲ ಭಾರತ ಗಾಣಿಗರ ಸಂಘದಿಂದ ಸಚಿವರು, ಶಾಸಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾವು ಮೂಲತಃ ಗಾಣಿಗರು. ಆದರೆ, ದಾವಣಗೆರೆ, ಚಿತ್ರದುರ್ಗ ಸೇರಿ ಹಲವೆಡೆ ವೀರಶೈವ ಲಿಂಗಾಯತ ಗಾಣಿಗ, ಲಿಂಗಾಯತ ಗಾಣಿಗ ಎಂದು ಜಾತಿ ಪ್ರಮಾಣ ಪತ್ರದಲ್ಲಿ ಬರೆಸಿದ್ದರ ಪರಿಣಾಮ ಅರ್ಹರಿದ್ದರೂ 2‘ಎ’ ಮೀಸಲು ಸೌಲಭ್ಯ ಸಿಗುತ್ತಿಲ್ಲ. ಸುಳ್ಳು ಮಾಹಿತಿ ನೀಡಿ ಮೀಸಲು ಕೇಳುತ್ತಿಲ್ಲ. ಆಗಿರುವ ತಪ್ಪನ್ನು ಸರಿಪಡಿಸಿ ನ್ಯಾಯ ಕೊಡಿಸುವ ಕೆಲಸ ಶಾಸಕರಿಂದ ಆಗಬೇಕು ಎಂದು ಮನವಿ ಮಾಡಿದರು.

ವೀರಶೈವ ಲಿಂಗಾಯತ ಸಮಾಜದ ಕಾರ್ಯಕ್ರಮ ಒಳಗೊಂಡು ಅನೇಕ ಕಾರ್ಯಗಳಲ್ಲಿ ಭಾಗವಹಿಸುತ್ತ, ಅಗತ್ಯ ಸಹಕಾರ ನೀಡುತ್ತ ಬಂದಿರುವ ಸಮಾಜ ನಮ್ಮದು. 14 ಉಪ ಪಂಗಡಗಳಿದ್ದು, ಕೊನೆಯದಾಗಿ ಸಂಘಟನೆ ಆದ ಸಮಾಜವಾಗಿದೆ. ನಮ್ಮಲ್ಲೂ ಸಾಕಷ್ಟು ಮಂದಿ ಬಡ ವಿದ್ಯಾರ್ಥಿಗಳಿದ್ದು, ನೀಟ್, ಜೆಇಇ ಸೇರಿ ಇತರೆ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡಿಸಲು ಗಾಣಿಗ ಪೀಠ ಸಿದ್ಧವಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಎಸ್ಸಿ, ಎಸ್ಟಿ ಪಟ್ಟಿ, 2‘ಎ’ ಸೇರಿ ಮೀಸಲಾತಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಸೂಕ್ಷ್ಮ ವಿಚಾರವಾಗಿದ್ದು, ವರದಿ ಆಧರಿಸಿ, ಸಚಿವ ಸಂಪುಟದಲ್ಲಿ ಚರ್ಚಿಸಿ ಸಿಎಂ ಕ್ರಮ ವಹಿಸಲಿದ್ದಾರೆ ಎಂದು ಭರವಸೆ ನೀಡಿದರು.

ಜಿಲ್ಲೆಯ ಜನ ಕಾಂಗ್ರೆಸ್‌ನ ಐವರು ಶಾಸಕರಿಗೆ ಆಶೀರ್ವದಿಸಿ ಶಕ್ತಿ ಜತೆಗೆ ಉತ್ಸಾಹ ತುಂಬಿ ಕಳುಹಿಸಿದ್ದೀರಿ. ಅಭಿವೃದ್ಧಿ ಕುರಿತು ಸಾಕಷ್ಟು ನಿರೀಕ್ಷೆಗಳಿವೆ. ಜಿಲ್ಲಾ ಕೇಂದ್ರ ಚಿತ್ರದುರ್ಗ ಸಾಕಷ್ಟು ಪ್ರಗತಿ ಕಾಣಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಆಶ್ವಾಸನೆ ನೀಡಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬಸವಣ್ಣನವರ ತತ್ವ ಆದರ್ಶ ಪಾಲಿಸುತ್ತಾ ಬಂದಿರುವ ಈ ಸಮಾಜದವರು ಶ್ರಮ ಜೀವಿಗಳು. ಕಾಂಗ್ರೆಸ್ ನಂಬಿ ಜನ ಅಧಿಕಾರ ನೀಡಿದ್ದಾರೆ. ಅವರ ಆಶಯಗಳಿಗೆ ಬದ್ಧವಾಗಿ ಕೆಲಸ ಮಾಡಲಿದ್ದೇವೆ. ಆರೂ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಅತ್ಯವಶ್ಯಕ. ಕೇಂದ್ರ ಸರ್ಕಾರದ ಸಹಕಾರ ಪಡೆದು ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದರು.

ಸಂಘದ ಅಧ್ಯಕ್ಷ ಡಿ.ಎಸ್.ಸುರೇಶ್‌ಬಾಬು, ಪಿ.ವೀರೇಂದ್ರಕುಮಾರ್, ಮುಖಂಡರಾದ ಗುರಣ್ಣ ಜಿ.ಗೊಡಿ, ಮಲ್ಲಿಕಾರ್ಜುನ ಲೋಣಿ, ಮೋಹನ್, ಪ್ರಾಚಾರ್ಯೆ ಡಾ.ಆರ್.ಗೌರಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ.ಎಸ್.ಸೋಮಶೇಖರ್, ರುದ್ರಮುನಿ ಇತರರಿದ್ದರು.

*ಕೋಟ್
ನಮ್ಮದು ಕಾಯಕ ಸಮಾಜ. ಇದರಿಂದಲೇ ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ವೈದ್ಯಕೀಯ ಕಾಲೇಜು ಆರಂಭ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
ಕೆ.ಸಿ.ವೀರೇಂದ್ರ ಪಪ್ಪಿ, ಶಾಸಕ

*ಕೋಟ್
ಗಾಣಿಗ ಸಮುದಾಯದ ನರೇಂದ್ರ ಮೋದಿ ಅವರು ಪ್ರಧಾನಿ ಆಗಿದ್ದಾರೆ. ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಶಕ್ತಿ ಈ ಸಮಾಜಕ್ಕಿದೆ. ದೇಗುಲ, ಮನೆಗಳಲ್ಲಿ ದೀಪ ಬೆಳಗುತ್ತಿರುವುದೇ ನಿಮ್ಮಿಂದ.
ಕೆ.ಎಸ್.ನವೀನ್, ಎಂಎಲ್ಸಿ

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ
ಗಾಣಿಗ ಸಮುದಾಯದ ಬಿ.ಎಸ್.ಯಡಿಯೂರಪ್ಪ ಅವರನ್ನು ಅವಧಿಗೂ ಮುನ್ನ ಸಿಎಂ ಸ್ಥಾನದಿಂದ ಕೆಳಗಿಳಿಸದಿದ್ದರೆ, ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಐವರು ಶಾಸಕರು ಗೆಲ್ಲುತ್ತಿರಲಿಲ್ಲ, ಅಧಿಕಾರಕ್ಕೂ ಬರುತ್ತಿರಲಿಲ್ಲ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅಭಿಪ್ರಾಯಪಟ್ಟರು. ಗಾಣಿಗ ಪರಾವಲಂಬಿ ಸಮಾಜವಲ್ಲ, ಯಾರಿಗೂ ತೊಂದರೆ ಮಾಡಿಲ್ಲ. ಹತ್ತಾರು ಜನರಿಗೆ ಅನುಕೂಲ ಮಾಡಿಕೊಡುವ, ಪರೋಪಕಾರಿ ಗುಣ ಹೊಂದಿರುವ ಸಮುದಾಯ. ಚಿತ್ರದುರ್ಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡು ಸಮುದಾಯಕ್ಕೆ ಹೆಸರು ತರುವ ಕೆಲಸ ವೀರೇಂದ್ರ ಪಪ್ಪಿ ಮಾಡಲಿ ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net