

ಹಾಸನ: ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನವನ್ನು ನಗರಸಭೆ ಸದಸ್ಯರಾದ ನವೀನ್ ಹಾ.ರ. ನಾಗರಾಜ್ ಅವರಿಗೆ ನೀಡುವಂತೆ ಜಿಲ್ಲಾ ಗಾಣಿಗರ ಸಂಘದಿಂದ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಶಾಸಕರ ನಿವಾಸಕ್ಕೆ ತೆರಳುವ ಮೊದಲು ಅಡ್ಲಿಮನೆ ರಸ್ತೆ ಬಳಿ ಇರುವ ಶ್ರೀ ಶಿವಜ್ಯೋತಿ ಕಲ್ಯಾಣ ಮಂಟಪದಲ್ಲಿ ಗಾಣಿಗ ಸಮುದಾಯದ ಮುಖಂಡರು ಸಭೆ ಸೇರಿ ಚರ್ಚಿಸಿದರು. ನವೀನ್ ಅವರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಸಿಗುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರಿಗೆ ಮೊದಲು ಮನವಿ ಸಲ್ಲಿಸಲು ತೀರ್ಮಾನಿಸಿದರು.
ಈ ವೇಳೆ ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಜಕ್ಕನಹಳ್ಳಿ ಮೋಹನ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ನಗರಸಭೆ ಅಧ್ಯಕ್ಷ ಸ್ಥಾನವು ಇದುವರೆಗೂ ಗಾಣಿಗ ಜನಾಂಗದ ಯಾವೊಬ್ಬ ವ್ಯಕ್ತಿಗೂ ಸಿಕ್ಕಿಲ್ಲ. ಈ ಬಾರಿ 2024ರ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗಕ್ಕೆ ಬಂದಿರುವುದರಿಂದ ಶಾಸಕರು ದಯಮಾಡಿ ನಮ್ಮ ಜನಾಂಗದ ನಗರಸಭಾ ಸದಸ್ಯರಾದ ನವೀನ್ ಹಾ.ರ. ನಾಗರಾಜ್ ರವರಿಗೆ ನಗರ ಸಭೆ ಅಧ್ಯಕ್ಷ ಸ್ಥಾನವನ್ನು ಕೊಡುವುದರ ಮೂಲಕ ಗಾಣಿಗ ಜನಾಂಗದ ಹಲವು ವರ್ಷಗಳ ಕನಸನ್ನು ನನಸು ಮಾಡಿ ಎಂದು ಗಾಣಿಗರ ಸಂಘ ಹಾಗೂ ಶ್ರೀ ಕನ್ನಂಬಾಡಿಯಮ್ಮ, ಕೆಂಚಮ್ಮ ಟ್ರಸ್ಟ್ ಪದಾಧಿಕಾರಿಗಳ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು.
ಗಾಣಿಗ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡುವಂತೆ ಕೇಂದ್ರದ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗು ಎಚ್.ಡಿ. ರೇವಣ್ಣ ಅವರ ಗಮನಕ್ಕೂ ತರಬೇಕೆಂದು ಗಾಣಿಗ ಜನಾಂಗದ ನಾವೆಲ್ಲರೂ ವಿನಂತಿಸಿಕೊಳ್ಳುತ್ತೇವೆ. ನಮ್ಮ ಜನಾಂಗಕ್ಕೆ ದಿ. ಎಚ್.ಎಸ್. ಪ್ರಕಾಶ್ ಅವರು ಶಾಸಕರಾಗಿದ್ದಾಗ ಸಾಕಷ್ಟು ಕೆಲಸ-ಕಾರ್ಯಗಳನ್ನು ಮಾಡಿಕೊಟ್ಟಿದ್ದಾರೆ. ಅಲ್ಲದೆ ನಮ್ಮ ಜನಾಂಗದ ಪ್ರತಿಯೊಬ್ಬರ ಒಡನಾಡಿಯಾಗಿದ್ದರು. ತಾವು ಸಹ ನಿಮ್ಮ ತಂದೆಯವರ ರೀತಿಯಲ್ಲಿ ನಮ್ಮ ಜನಾಂಗದ ಮೇಲೆ ಕೃಪೆ ತೋರಿಸಿ ಅಧ್ಯಕ್ಷ ಸ್ಥಾನವನ್ನು ನವೀನ್ ಹಾ.ರ. ನಾಗರಾಜ್ ಅವರಿಗೆ ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ವಿನಂತಿಸಿದರು.
ಶ್ರೀ ಕನ್ನಂಬಾಡಿಯಮ್ಮ ಮತ್ತು ಶ್ರೀ ಕೆಂಚಾಮ್ಮ ಟ್ರಸ್ಟ್ ಅಧ್ಯಕ್ಷ ವಿಪ್ರೋ ಸತೀಶ್ ಕುಮಾರ್ ಮಾತನಾಡಿ, ನಗರಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿರುವುದು ಗಾಣಿಗ ಜನಾಂಗಕ್ಕೆ ಒಲಿದು ಬಂದ ಅದೃಷ್ಟವಾಗಿದೆ. ನಗರಸಭೆ ಸದಸ್ಯರಾಗಿರುವ ನಮ್ಮ ಜನಾಂಗದ ನವೀನ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡಬೇಕು. ಹಿಂದೆ ನವೀನ್ ಅವರ ತಂದೆ ಹಾ.ರಾ. ನಾಗರಾಜು ಅವರು ಐದು ಬಾರಿ ನಗರಸಭೆ ಸದಸ್ಯರಾಗಿದ್ದರು. ನಂತರ ಅವರ ಪತ್ನಿ ಎರಡು ಬಾರಿ ನಗರಸಭೆ ಸದಸ್ಯರಾಗಿದ್ದು, ನವೀನ್ ಕೂಡ ಈಗ ಸದಸ್ಯರಾಗಿದ್ದಾರೆ. ಆದರೆ ಇದುವರೆಗೂ ನಗರಸಭೆ ಅಧ್ಯಕ್ಷ ಸ್ಥಾನವು ಗಾಣಿಗರ ಸಮಾಜಕ್ಕೆ ಸಿಕ್ಕಿಲ್ಲ. ಈ ಬಾರಿಯಾದರೂ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ನವೀನ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಿಕೊಡಬೇಕೆಂದು ಕೋರಿದರು.
ಇದೆ ವೇಳೆ ಸಮುದಾಯದ ಮುಖಂಡರಾದ ರಮೇಶ್, ಸುಕುಮಾರ್, ಎಚ್.ಎಲ್. ರಾಜಣ್ಣ, ಎಚ್.ಎಂ. ಜಯಶಂಕರ್, ರತೀಶ್ ಕುಮಾರ್, ಮಹೇಶ್, ಎಚ್.ಎಲ್. ಸತ್ಯನಾರಾಯಣ, ನಂದೀಶ್, ಯದು, ಲೋಕೇಶ್, ಎಚ್.ಆರ್. ಪಾಲಾಕ್ಷ, ಮನುಕುಮಾರ್ ಇತರರು ಉಪಸ್ಥಿತರಿದ್ದರು.