ಗಾಣಗಾಪುರ, ಘತ್ತರಗಾ ಅಭಿವೃದ್ಧಿಗೆ ಕ್ರಮ

oplus_3145728
ಘತ್ತರಗಾದಲ್ಲಿ ಭಾಗ್ಯವಂತಿ ದೇವಸ್ಥಾನ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ತಯಾರಿಸುವ ಬಗ್ಗೆ ಶಾಸಕ ಎಂ.ವೈ. ಪಾಟೀಲ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಡಿಸಿ ಫೌಜಿಯಾ ತರನ್ನುಮ್, ಎಸಿ ಸಾಹಿತ್ಯ ಆಲದಕಟ್ಟಿ ಇದ್ದರು.
Published on

ಅಫಜಲಪುರ: ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಪ್ರಸಿದ್ಧ ಯಾತ್ರಾ ಕ್ಷೇತ್ರ ಭಾಗ್ಯವಂತಿ ದೇವಸ್ಥಾನದ ಅಭಿವೃದ್ಧಿಗೆ ೫೦ ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಘತ್ತರಗಾ ಭಾಗ್ಯವಂತಿ ದೇವಸ್ಥಾನದಲ್ಲಿ ಮಾಸ್ಟರ್ ಪ್ಲ್ಯಾನ್ ಬಗ್ಗೆ ಮಂಗಳವಾರ ಪರಿಶೀಲನಾ ಸಭೆ ನಡೆಸಿದ ಅವರು, ಕ್ಷೇತ್ರದಲ್ಲಿ ಯಾತ್ರಿಕ ನಿವಾಸ, ಕಲ್ಯಾಣ ಮಂಟಪ, ದಾಸೋಹ ಭವನ, ಆಡಳಿತ ಕಚೇರಿ ನಿರ್ಮಾಣ, ಸಿಸಿ ಕ್ಯಾಮರಾ, ಹೈಟೆಕ್ ಶೌಚಗೃಹ, ಹೈಮಾಸ್ಟ್​ ದೀಪ ಹೀಗೆ ಅನೇಕ ಪ್ರಗತಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ದೇವಸ್ಥಾನಕ್ಕೆ ಬಂದಿರುವ ಬಂಗಾರದಲ್ಲಿ ದೇವಿ ಆಭರಣ ಹೊರತುಪಡಿಸಿ ಇನ್ನುಳಿದ ಚಿನ್ನ ಮಾರಾಟ ಮಾಡಿ ಬರುವ ಹಣವನ್ನು ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದರು.

ಶಾಸಕ ಎಂ.ವೈ. ಪಾಟೀಲ್ ಮಾತನಾಡಿ, ರಾಜ್ಯಾದ್ಯಂತ ಭಾಗ್ಯವಂತಿ ದೇವಿಯ ಭಕ್ತರಿದ್ದು, ಮಾದರಿ ದೇವಸ್ಥಾನವಾಗಿ ಅಭಿವೃದ್ಧಿಪಡಿಸಬೇಕು. ವಿವಿಧ ಯೋಜನೆಗಳಿಗೆ ಬೇಕಾಗುವ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು. ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಕೋರಿದರು.

ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಕುದರಿ ಮಾತನಾಡಿ, ಭಕ್ತರು ನೀಡಿದ ೪೦ ಕೆಜಿ ಬಂಗಾರ ಸಂಗ್ರಹವಿದ್ದು. ಯಾತ್ರಿ ನಿವಾಸದಲ್ಲಿ ೮೮ ಕೋಣೆ ನಿರ್ಮಾಣಕ್ಕೆ ಪ್ಲ್ಯಾನ್​ ತಯಾರಿಸಲಾಗಿದೆ. ಇದರಲ್ಲಿ ೫೦೦ ಜನರಿಗೆ ವಸತಿ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿ ಉಜ್ಜಲ ಸೋನಾಲ್ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರವಾಸಿ ತಾಣಗಳಂತೆ ಘಾಟ್ ನಿರ್ಮಿಸಲು ೨.೫೦ ಕೋಟಿ ವೆಚ್ಚದಲ್ಲಿ ಕೆಲಸ ಕೈಗೊಂಡಿದ್ದು, ಅರ್ಧ ಮುಗಿದಿದೆ. ಮೂರು ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ತಿಳಿಸಿದರು.

ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ಕೌಲಗಿ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಲೋಕೋಪಯೋಗಿ ಇಲಾಖೆ ಎಇಇ ಲಕ್ಷ್ಮೀಕಾಂತ ಬಿರಾದಾರ, ಕೆಎನ್‌ಎನ್‌ಎಲ್ ಎಇಇ ಸಂತೋಷ ಸಜ್ಜನ್, ಸಿಪಿಐ ಚನ್ನಯ್ಯ ಹಿರೇಮಠ, ಶಿವಕಾಂತಮ್ಮ, ಅನುಸುಯಾ ಅಷ್ಟಗಿ ಇತರರಿದ್ದರು.

ಕಾಶಿಯಂತೆ ದತ್ತನ ದೇಗುಲ ಪ್ರಗತಿ: ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರ ದೇವಲ ಗಾಣಗಾಪುರದ ದತ್ತನ ದೇಗುಲ ಕಾಶಿ ಮಾದರಿಯಲ್ಲಿ ಅಭಿವೃದ್ಧಿಗೆ ಕೇಂದ್ರದ ಪ್ರಸಾದ ಯೋಜನೆ ಅಡಿ ೯೮ ಕೋಟಿ ರೂ. ವಿವಿಧ ಕಾಮಗಾರಿಗಳ ಅನುಷ್ಠಾನ ಕುರಿತು ಶಾಸಕ ಎಂ.ವೈ. ಪಾಟೀಲ್ ಮತ್ತು ಡಿಸಿ ಫೌಜಿಯಾ ತರನ್ನುಮ್ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರಸಾದ ಯೋಜನೆ ಹೊರತುಪಡಿಸಿ ಇನ್ನುಳಿದ ಕಾಮಗಾರಿಗಳ ಕುರಿತು ಪ್ರಸ್ತಾವನೆ ಸಲ್ಲಿಸಬೇಕು. ಶೀಘ್ರದಲ್ಲೇ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಕಾಮಗಾರಿಗಳ ಮಂಜೂರಾತಿ ಪಡೆದುಕೊಳ್ಳೋಣ.

| ಎಂ.ವೈ.ಪಾಟೀಲ್

ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net