ಗಾಂಧೀಜಿ, ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಮಾಡಿ

ಗಾಂಧೀಜಿ, ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಮಾಡಿ
Published on

ಹಾಸನ: ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಸಿದ್ಧತೆಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅ.2ರಂದು ನಗರದ ಎಂ.ಜಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಬೆಳಗ್ಗೆ 9 ಗಂಟೆಗೆ ಜಯಂತಿಯನ್ನು ಆಚರಿಸಲಾಗುವುದು. ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಂಧಿ ಭಜನೆ. ಹಾಗೂ ಸಂಗೀತ ಶಿಕ್ಷಕರಿಂದ ನಾಡಗೀತೆ, ರೈತಗೀತೆ, ರಾಷ್ಟ್ರಗೀತೆ ಸಂಗೀತ ಕಾರ್ಯಕ್ರಮ ನಂತರ
ಸರ್ವ ಧರ್ಮ ಗುರುಗಳಿಂದ (ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ) ಪ್ರವಚನ ವ್ಯವಸ್ಥೆಯನ್ನು ಹಾಗೂ ಗಾಂಧಿಜೀಯವರ ಅಪರೂಪದ ಛಾಯಚಿತ್ರದ ಚಿತ್ರಗಳನ್ನು ಗಾಂಧಿಭವನ ಅವರಣದಲ್ಲಿ ಪ್ರದರ್ಶಿಸಲು ಮತ್ತು ಹಿರಿಯ ಸಹಾಯಕ ನಿರ್ದೇಶಕರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರಿಗೆ ತಿಳಿಸಿದರು.
ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಹಾಸನ ಉಪವಿಭಾಗಾಧಿಕಾರಿ , ತಹಸೀಲ್ದಾರ್ ಇವರು ಯಾವುದೇ ಲೋಪದೋಷವಿಲ್ಲದೆ ನಿರ್ವಹಿಸುತ್ತಾರೆ. ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು. ಮಹಾತ್ಮಗಾಂಧಿಜಿಯವರ ಕುರಿತು ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶನ ಏರ್ಪಡಿಸಲು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಅ.2 ರಂದು ಜಿಲ್ಲೆಯಾದ್ಯಂತ ಕಸಾಯಿ ಖಾನೆಗಳು ತೆರೆಯದಂತೆ ಮತ್ತು ಯಾವುದೇ ಪ್ರಾಣಿವಧೆ ಆಗದಂತೆ ಹಾಗೂ ಮದ್ಯಮಾರಾಟ ಮಾಡದಂತೆ ಅಗತ್ಯ ಕ್ರಮವಹಿಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಮತ್ತು ಅಬಕಾರಿ ಉಪ ಆಯುಕ್ತರಿಗೆ ಕ್ರಮವಹಿಸಬೇಕು.
ಪೌರಾಯುಕ್ತ ನೇತೃತ್ವದಲ್ಲಿ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರನ್ನು ಒಳಗೊಂಡಂತೆ ಅ.2 ರಂದು ಬೆಳಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಗಾಂಧಿ ಭವನದಿಂದ ಶಂಕರ ಮಠದ ರಸ್ತೆಯ ವರೆಗೆ ಮತ್ತು ಡೈರಿ ವೃತ್ತದಿಂದ ಎನ್‌ಆರ್ ವೃತ್ತದ ವರೆಗೆ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಚಿಸಿದರು.
ಶಾಲೆ ಹಾಗೂ ಅಂಗನವಾಡಿ ಮಕ್ಕಳಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ವೇಷಭೂಷಣ ಸ್ಪರ್ಧೆ ಏರ್ಪಡಿಸುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಉಪ ವಿಭಾಗಾಧಿಕಾರಿ ಮಾರುತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net