ಬಳ್ಳಾರಿ : ಮಹಾತ್ಮ ಗಾಂಧೀಜಿ ಅವರ ಜೀವನ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಈ. ತುಕಾರಾಮ್ ಹೇಳಿದರು.
ನಗರದ ಡಿಸಿ ಕಚೇರಿ ಆವರಣದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದೊಂದಿಗೆ ಬುಧವಾರ ನಡೆದ ಮಹಾತ್ಮ ಗಾಂಧೀಜಿಯವರ 155 ನೇ ಜಯಂತ್ಸೋತ್ಸವ (ಗಾಂಧಿ ಭಜನೆ ಹಾಗೂ ಸರ್ವಧರ್ಮ ಪ್ರಾರ್ಥನೆ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ವಿಶ್ವದ ಶಾಂತಿ ಸಾಧಕ ಅಗ್ರಗಣ್ಯರಲ್ಲಿ ಪ್ರಮುಖರು, ಇಡೀ ಜಗತ್ತೇ ನಿಬ್ಬೆರಗಾಗುವಂತೆ ಇನ್ನೊಬ್ಬರಿಗಾಗಿ ತಮ್ಮ ಬದುಕನ್ನು ಸವೆಸಿದ ಗಾಂಧೀಜಿಯವರನ್ನು ಹಾಗೂ ಅವರ ವಿಚಾರಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವುದು, ದಾಟಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಅವಳಿ ಜಿಲ್ಲೆಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮಾದರಿ ಜಿಲ್ಲೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಈ ಭಾಗದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದಾಗ ತುರ್ತು ಚಿಕಿತ್ಸೆಗಾಗಿ ಹೊಸಪೇಟೆ ನಗರದಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು. ಮಹನೀಯರ ದಾರ್ಶನಿಕ ಬದುಕಿನ ಜೀವನ ಚಿತ್ರಣವನ್ನು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ವಿಶೇಷ ಕೈಪಿಡಿ ರಚಿಸಿ, ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿತರಿಸಬೇಕು. ಇದಕ್ಕೆ ಸಿಎಸ್‌ಆರ್ ನಡಿ ವಿಶೇಷ ಅನುದಾನ ಕಲ್ಪಿಸಲಾಗುವುದು ಎಂದು ಡಿಡಿಪಿಐ ಅಧಿಕಾರಿಗಳಿಗೆ ಸೂಚಿಸಿದರು.
ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಗಾಂಧೀಜಿ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟವರು. ಜಗತ್ತಿನ ಇತರೆ ರಾಷ್ಟ್ರಗಳ ಅಹಿಂಸಾ ಮಾರ್ಗದ ಪ್ರಾಮುಖ್ಯತೆ ತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.
ತಾಲೂಕಿನ ಇಬ್ರಾಹಿಂಪುರದ ಎಸ್. ಎಂ. ಹುಲುಗಪ್ಪ ಮತ್ತು ತಂಡದಿಂದ ಜಯಂತಿಯ ಅಂಗವಾಗಿ ಗಾಂಧೀಜಿ ಕುರಿತು ಭಜನಾ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಶಾಲಾ ಮಕ್ಕಳು ಸರ್ವಧರ್ಮ ಗ್ರಂಥಗಳ ಬೋಧನೆ ಮಾಡಿದ್ದು, ವಿಶೇಷವಾಗಿತ್ತು.
ಬಳಿಕ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಿದರು.