

ಬಳ್ಳಾರಿ : ಮಕ್ಕಳು ಗಾಂಧೀಜಿ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಿಡಿಪಿಐ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಚಂದ್ರಕಾಂತ್ ಹೇಳಿದರು.
ನಗರದ ಡಿಡಿಪಿಐ ಕಚೇರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಅಂಗವಾಗಿ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಕುರಿತು ಆಯೋಜಿಸಿದ್ದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಆಕರವಾಗಿ ಬಳಸಿದ ಪರಾಮರ್ಶನ, ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು ಎಂದರು.
ಡಿಡಿಪಿಐ ಕಚೇರಿಯ ವೃತ್ತಿ ವಿಷಯ ಪರೀವೀಕ್ಷಕಿ ವೇದಾವತಿ ಮಾತನಾಡಿದರು.
ಪ್ರೌಢ ಶಾಲಾ ವಿಭಾಗದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಗಾಂಧೀಜಿ ವಿಚಾರದಲ್ಲಿ ಸತ್ಯಾಗ್ರಹ, ನನ್ನ ಬದುಕಿನಲ್ಲಿ ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳುವ ಬಗೆ ಮತ್ತು ತತ್ವಗಳಿಂದ ದೇಶ ಕಟ್ಟುವ ಬಗೆ ಸೇರಿ ನಾಲ್ಕು ವಿಷಯಗಳ ಕುರಿತು ಪ್ರಬಂಧ ಆಯೋಜಿಸಲಾಗಿತ್ತು.
ತಾಲೂಕು ಮಟ್ಟದಲ್ಲಿ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದ ಒಟ್ಟು 12 ವಿದ್ಯಾರ್ಥಿಗಳು ಒಟ್ಟು ಜಿಲ್ಲಾ ಹಂತಕ್ಕೆ ಆಯ್ಕೆಯಾದರು.