

ಹಾಸನ : ನಗರದ ಮಹಾರಾಜ ಪಾರ್ಕ್ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮತಿ ಬೃಹತ್ ಕರ್ನಾಟಕ ಜನಜಾಗೃತಿ ಬೃಹತ್ ಜಾಥಗೆ ಮಂಗಳವಾರ ಚಾಲನೆ ನೀಡಲಾಯಿತು. ಜಾಥ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ಮಮತಾ ಹರೀಶ್ ರಾವ್, ಶ್ರೀ ಕ್ಷೇತ್ರ ಧರ್ಮಸ್ಥಳವು 800 ವರ್ಷಗಳ ಇತಿಹಾಸ ಹೊಂದಿರುವ ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಕ್ಷೇತ್ರದ ಪರಂಪರೆಯಂತೆ ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಹಾಗೂ ಅಭಯ ದಾನಗಳಂತಹ ಚತುರ್ದಾನಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಕಳೆದ 5 ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಂಪರೆಯ ಜತೆಗೆ ಸಾಮಾಜಿಕ ಪರಿವರ್ತನೆಗೆ ಹೊಸ ನಾಂದಿ ಹಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಜನರ ಸಂಘಟನೆಗೆ ಸ್ವ-ಸಹಾಯ ಸಂಘ ಚಳವಳಿ, ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ, ಅಂತರ್ಜಲ ವೃದ್ಧಿಗಾಗಿ ಕೆರೆಗಳ ಹೂಳೆತ್ತುವ ಯೋಜನೆ, ವಿಕಲಚೇತನರಿಗೆ ಜನಮಂಗಳ ಕಾರ್ಯಕ್ರಮಗಳ ಮೂಲಕ ಜನ ಸಾಮಾನ್ಯರ ಪರಿವರ್ತನೆಗೆ ನೇರ ಕೊಡುಗೆ ನೀಡುತ್ತಿದ್ದಾರೆ ಎಂದರು.
ಜನ ಕಲ್ಯಾಣ ಕಾರ್ಯಕ್ರಮವನ್ನು ಯಶಸ್ವಿವಾಗಿ ಅನುಷ್ಠಾನಗೊಳಿಸಲು ನಮ್ಮ ಹಾಸನ ಜಿಲ್ಲೆಯಲ್ಲಿ 530 ಕಾರ್ಯಕರ್ತರು ನಿರಂತರ ಸೇವೆ ಮಾಡುತ್ತಿದ್ದಾರೆ. ಸಂಘಟನೆಯ ಮೂಲಕ ಪ್ರಗತಿಯನ್ನು ಸಾಧಿಸಲು ಕೂಲಿ, ಕಾರ್ಮಿಕರ, ಕೃಷಿಕರ, ಮಹಿಳೆಯರ, ದುರ್ಬಲ ವರ್ಗದವರನ್ನು ಸಂಘಟಿಸಿ ಉಳಿತಾಯದ ಮನೋಭಾವನೆಯ ಮೂಲಕ ಅರಿವು ಮೂಡಿಸಲಾಗುತ್ತಿದೆ. ವಾರಕ್ಕೊಮ್ಮೆ ಸೇರಿ ಅವರ ಸಮಗ್ರ ಅಭಿವೃದ್ಧಿಗೆ ಚಿಂತಿಸಿ, ಉಳಿತಾಯ, ಆರ್ಥಿಕ ಶಿಸ್ತು ಮೂಡಿಸಲು ಇದುವರೆಗೆ 17,331 ಸ್ವ ಸಹಾಯ- ಪ್ರಗತಿಬಂಧು ಸಂಘಗಳನ್ನು ರಚನೆ ಮಾಡಲಾಗಿದೆ. ಪ್ರಸ್ತುತ ವರ್ಷ 1.14 ಲಕ್ಷ ಸದಸ್ಯರಿದ್ದು, ಇದುವರೆಗೂ ಒಟ್ಟು ರೂ. 89,60 ಕೋಟಿ ರೂ. ಉಳಿತಾಯ ಮಾಡಿ ತಮ್ಮ ಸಂಘದ ಖಾತೆಗಳಿಗೆ ಜಮೆ ಮಾಡಿ ಆಂತರಿಕ ವ್ಯವಹಾರ ನಡೆಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್, ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಉಪಾಧ್ಯಕ್ಷ ಸೋಮಶೇಖರ್, ಸದಸ್ಯರಾದ ಮಂಜುನಾಥ್, ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣಮಂಜೇಗೌಡ, ಕೇಶವ, ಗಣೇಶ್, ಬಿದರಿಕೆರೆ ಜಯರಾಂ ಇತರರು ಉಪಸ್ಥಿತರಿದ್ದರು.