

ಮೈಸೂರು: ಗಾಂಧಿ ಬಗ್ಗೆ ಸಾಮಾನ್ಯ ಮಾಹಿತಿ ತಿಳಿಯದವರು ಟೀಕೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್, ಗಾಂಧಿ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಿರ್ದೇಶಕ ಪ್ರೊ.ಜಿ.ಬಿ. ಶಿವರಾಜು ಕಳವಳವ್ಯಕ್ತಪಡಿಸಿದರು.
ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ, ಗಾಂಧಿ ಭವನ, ಸಮಾಜಶಾಸ್ತ್ರ ಅಧ್ಯಯನ ವಿಭಾಗ ಸಹಯೋಗದಲ್ಲಿ ಮಾನಸಗಂಗೋತ್ರಿಯಲ್ಲಿರುವ ಇಎಂಆರ್‌ಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 156ನೇ ಜಯಂತಿಯಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಅಸ್ಪಶ್ಯತಾ ನಿವಾರಣೆಯ ಹೊಣೆಗಾರಿಕೆ: ಗಾಂಧೀಜಿ ಚಿಂತನೆ, ಪ್ರಯೋಗ ಮತ್ತು ಪ್ರಸ್ತುತತೆ ವಿಚಾರ ಕುರಿತು ಮಾತನಾಡಿದರು.
ಟಿಆರ್‌ಪಿಗಾಗಿ ಆಕರ್ಷಿಸುವ ವಿಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮುಗ್ಧ ಮನಸ್ಸಿನ ಮಕ್ಕಳನ್ನು ಹಾಳು ಮಾಡುತ್ತಿದ್ದಾರೆ. ಗಾಂಧೀಜಿ ವಿಚಾರಧಾರೆಯನ್ನು ಘರ್ಷಣೆಗೆ ಬಳಕೆ ಮಾಡುತ್ತಿರುವುದು ಅಪಾಯಕಾರಿ. ಇದನ್ನು ಹೋಗಲಾಡಿಸದಿದ್ದರೆ ಅನಾಹುತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು
ಸಂತರು, ದಾರ್ಶನಿಕರು, ಸಮಾಜಕ್ಕೆ ದಿಕ್ಕು ತೋರಿದ ನಾಯಕರ ಗೋರಿ ಅಗೆಯುವುದನ್ನು ನಿಲ್ಲಿಸಬೇಕು. ಪೂನಾ ಒಪ್ಪಂದದಿಂದ ಗಾಂಧೀಜಿ ಟೀಕಿಸುವವರಿಗೆ ದೇವನೂರ ಮಹಾದೇವರ ಲೇಖನ ಕೊಡುತ್ತೇನೆ. ಆಯಾ ಕಾಲದ ವಿಷಯವನ್ನು ಅಲ್ಲಿಗೆ ಬಿಡಬೇಕು ಎಂಬ ಮಹಾದೇವರ ಮಾತು ಮೌಲಿಕವಾದದ್ದು. ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
1921ರಲ್ಲಿ ಸವರ್ಣೀಯರ ಬಗ್ಗೆ ಮಾತಾಡಿದ ಗಾಂಧೀಜಿ 1926ರಲ್ಲಿ ನನ್ನ ಆಶ್ರಮದಲ್ಲಿ ವಿವಾಹವಾಗಬೇಕಾದೆ ಹುಡುಗ ಅಥವಾ ಹುಡುಗಿ ಪರಿಶಿಷ್ಟ ಜಾತಿಗೆ ಸೇರಿರಬೇಕು ಎಂದು ಆಜ್ಞೆ ಮಾಡುತ್ತಾರೆ. ಅಸ್ಪಶ್ಯರ ಮೇಲೆ ಇಷ್ಟು ವರ್ಷಗಳ ಕಾಲ ನಾವು ನಡೆಸಿರುವ ದೌರ್ಜನ್ಯವೇ ಸಾಕು. ಅದನ್ನು ನಿಲ್ಲಿಸಬೇಕು ಎಂದು ಕರೆ ಕೊಡುತ್ತಾರೆ ಎಂದರು.
ಸಂವಿಧಾನ ಸಭೆಯಲ್ಲಿ 7 ಸಾವಿರ ಪ್ರಶ್ನೆಗಳಿಗೆ ಅಂಬೇಡ್ಕರ್ ಅವರು ಉತ್ತರಿಸಿದ್ದರು. ಈ ವಿಷಯದ ಕುರಿತು ಅಮೆರಿಕದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ನಾನು ರಚಿಸಿದ್ದೇನೆ ಎನ್ನುತ್ತಾರೆ. ಅಮೆರಿಕದ ಸಂವಿಧಾನ ಕುರಿತಾದ ಪ್ರಶ್ನೆಗೆ ಕೆಟ್ಟದಾಗಿದೆ ಎನ್ನುತ್ತಾರೆ. ಉತ್ತಮ ಸಂವಿಧಾನ ಕೆಟ್ಟ ವ್ಯಕ್ತಿಯ ನಿಯಂತ್ರಣದಲ್ಲಿದ್ದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಅಂಬೇಡ್ಕರ್ ಪ್ರತಿಕ್ರಿಯಿಸಿದ್ದಾರೆ. ವರ್ತಮಾನದಲ್ಲಿ ನಾವು ಅದನ್ನು ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸರಳತೆ ಜಗತ್ತಿನ ಸಾರಥಿ ಮತ್ತು ಸಭ್ಯತೆಯ ಮಾರ್ಗದಿಂದ ಜಗತ್ತನ್ನು ಗೆಲ್ಲಬಹುದು ಎನ್ನುತ್ತಾರೆ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು. ಆದ್ದರಿಂದ ಮುಕ್ತ ಮನಸ್ಸಿಲ್ಲದ ವ್ಯಕ್ತಿ ಬದುಕಿದ್ದರೂ ಸತ್ತಂತೆ. ಮುಕ್ತವಾದ ಮನಸ್ಸು ಒಬ್ಬನ ಅಸ್ತಿತ್ವದ ಪ್ರತೀಕ. ಇಬ್ಬರು ಮಹನೀಯರ ನುಡಿಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಯಾವ ಧರ್ಮ ಹಿಂಸೆ ಹೇಳುವುದಿಲ್ಲ. ಇಸ್ಲಾಂ ಅಂದರೆ ಶಾಂತಿ. ಅಸ್ತ್ರಗಳ ಮೇಲೆ ಬದುಕುವವರು ಅಲ್ಲಿಂದಲೇ ನಾಶವಾಗುತ್ತಾರೆ. ವೈರುಧ್ಯ, ಗೊಂದಲ, ಹಿಂಸೆ,ದ್ವೇಷ ಅಹಿಂಸೆಯನ್ನು ಜಗತ್ತಿನ ಭಂಡಾರವು ನಮ್ಮನ್ನು ಕಾಪಾಡುವುದಿಲ್ಲ ಎಂದು ಎಚ್ಚರಿಸಿದರು.
ಚಿಂತಕರೊಬ್ಬರು ಕಳೆದ ಎರಡು ಶತಮಾನಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದ ಮಾನವನ ಅಗಾಧ ಅನುಭವ ಅಸ್ಫೋಟಗೊಂಡಿದೆ. ಹಾಗೆಯೇ ಮನುಷ್ಯನ ಎದೆಯ ಕಾಲಕೂಟದಲ್ಲಿ ಹಿಂದೆಂದೂ ಕಾಣದ ದ್ವೇಷ, ಅಸೂಯೆ, ಸ್ವಜನಪಕ್ಷ, ಮತ್ಸರ ತುಂಬಿದೆ. ಇದನ್ನು ಶಿಕ್ಷಣದಿಂದ ತೊಡೆದು ಹಾಕಬೇಕಿದೆ ಎಂದು ಹೇಳಿದರು
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಆರ್.ಶಿವಪ್ಪ, ಸಮಾಜಶಾಸ್ತ್ರ ಅಧ್ಯಯನ ವಿಭಾಗ ಅಧ್ಯಕ್ಷೆ ಡಾ.ಎಸ್.ಯಶೋದಾ, ಗಾಂಧೀ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್ ಮುಂತಾದವರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮೈಸೂರು ವಿವಿ ಲಲಿತಕಲೆಗಳ ಕಾಲೇಜಿನ ವಿದ್ಯಾರ್ಥಿನಿಯರು ಗಾಂಧಿ ಭಜನೆ ಹಾಡಿದರು. ಇದ್ದರು.