ಗಾಂಧಿ ಮಾರ್ಕೆಟ್ ಗೂಡಂಗಡಿ ತೆರವು

21NLG1c
Published on

ನವಲಗುಂದ: ಕರೊನಾ ಮುಂಜಾಗ್ರತೆ ಮತ್ತು ಜನದಟ್ಟಣೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಇಲ್ಲಿನ ಪುರಸಭೆ ಅಧಿಕಾರಿಗಳು ಗಾಂಧಿ ಮಾರ್ಕೆಟ್​ನಲ್ಲಿರುವ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಡಬ್ಬಾ ಅಂಗಡಿಗಳನ್ನು ಗುರುವಾರ ತೆರವುಗೊಳಿಸಿ, ಎಪಿಎಂಸಿ ಉಪ ಮಾರುಕಟ್ಟೆಗೆ ಸ್ಥಳಾಂತರಗೊಳಿಸಿದರು.

ಡಬ್ಬಾ ಅಂಗಡಿಗಳಿಂದಾಗಿ ಮಾರ್ಕೆಟ್​ನಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿತ್ತು. ಇದರಿಂದ ಸ್ಥಳೀಯ ನಾಗರಿಕರು ಬೇಸತ್ತಿದ್ದರು. ಕೆಲ ದಿನಗಳ ಹಿಂದೆ ಅಂತ್ಯ ಸಂಸ್ಕಾರದ ಮೆರವಣಿಗೆಗೂ ತೊಂದರೆ ಉಂಟಾಗಿದ್ದರಿಂದ ನಾಗರಿಕರು ಮಾರ್ಕೆಟ್​ನಲ್ಲಿಯೇ ಶವವಿಟ್ಟು ಪ್ರತಿಭಟನೆ ನಡೆಸಿದ್ದರು.

ಎಪಿಎಂಸಿ ಉಪ ಮಾರುಕಟ್ಟೆಗೆ ತೆರಳಲು ಕೆಲ ಡಬ್ಬಾ ಅಂಗಡಿಕಾರರು, ದಿನಸಿ ವಸ್ತುಗಳ ಮಾರಾಟಗಾರರು ಪಟ್ಟು ಹಿಡಿದು ಪೊಲೀಸರು ಮತ್ತು ಪುರಸಭೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಆಗ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್​ಐ ಜಯಪಾಲ ಪಾಟೀಲ, ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ನಂತರ ಪರಿಸ್ಥಿತಿ ತಿಳಿಯಾಯಿತು.

ಆದರೆ, ಎಪಿಎಂಸಿಗೆ ತೆರಳಲು ವ್ಯಾಪಾರಸ್ಥರು ಹಿಂದೇಟು ಹಾಕಿದ್ದು, ಅಂಗಡಿಗಳನ್ನು ಮತ್ತು ವಸ್ತುಗಳನ್ನು ತಮ್ಮ ಮನೆ ಮತ್ತು ಖುಲ್ಲಾ ಜಾಗೆಗಳಲ್ಲಿ ಕೂಡಿಟ್ಟುಕೊಂಡಿದ್ದಾರೆ. ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ವಿಶಾಲವಾದ ಪ್ರದೇಶವಿದ್ದು, ವ್ಯಾಪಾರ ಮಾಡಲು ಸ್ಥಳ ಸೂಕ್ತವಾಗಿದೆ. ಈಗಾಗಲೇ ಪುರಸಭೆ ಅಧಿಕಾರಿಗಳು ವ್ಯಾಪಾರಸ್ಥರಿಗಾಗಿ ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹಂತ, ಹಂತವಾಗಿ ವ್ಯಾಪಾರಸ್ಥರಿಗೆ ಎಲ್ಲ ಅನುಕೂಲ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ತಹಸೀಲ್ದಾರ್ ನವೀನ ಹುಲ್ಲೂರ, ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್​ಐ ಜಯಪಾಲ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಎನ್.ಕೆ. ಖುದಾನವರ ಕಾರ್ಯಾಚರಣೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net