ಬೆಳಗಾವಿ: ನಗರದಲ್ಲಿ ಗಾಂಜಾ ಮತ್ತು ಹೆರಾಯಿನ್ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಗರ ಪೊಲೀಸ್ರು ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ. ಇಲ್ಲಿನ ಜಿಐಟಿ ಕಾಲೇಜಿನ ದತ್ತ ಮಂದಿರ ಬಳಿ ಗಾಂಜಾ ಮಾರುತ್ತಿದ್ದ ಉದ್ಯಮಬಾಗದ ರಾಜಾರಾಮ ನಗರದ ನಿವಾಸಿ ಕೇದಾರ ರೇಡೆಕರ ಮೇಲೆ ಉದ್ಯಮಬಾಗ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದೆಡೆ ಸುಭಾಷ ನಗರದ ಪ್ರಿಯಾಂಕ ರೆಸಿಡೆನ್ಸಿ ಬಳಿ ಮಾದಕ ಹೆರಾಯಿನ್ ಮಾರುತ್ತಿದ್ದ ಐವರನ್ನು ಬಂಧಿಸಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದಾಶಿವ ನಗರದ ರೆಹಾನ್ ರೋಟಿವಾಲೆ, ಮಹಾರಾಷ್ಟ್ರದ ಗಣೇಶ ಕುಮಾರ ನಾಗನೆ, ಸೈಯದ್ ಅಹ್ಮದ್, ಆದಿತ್ಯ ಪಡಾಳಕರ ಮತ್ತು ರುಕ್ಮಿಣಿ ನಗರದ ಮೊಹ್ಮದ್ಹುಸೇನ್ ಇನಾಮದಾರ ಬಂಧಿತರು. ದಾಳಿ ವೇಳೆ 30 ಸಾವಿರ ಮೌಲ್ಯದ 30 ಗ್ರಾಂ. ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.