ಮಳವಳ್ಳಿ: ತಾಲೂಕಿನ ಪೂರಿಗಾರಿ ಗ್ರಾಮದ ಹೊರವಲದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಬೆಳಕವಾಡಿ ಎಸ್‌ಐ ಅಶೋಕ್ ಸೋಮವಾರ ಬಂಧಿಸಿದ್ದಾರೆ.
ರಾಗಿಬೊಮ್ಮನಹಳ್ಳಿ ಗ್ರಾಮದ ಚಂದನ್‌ಕುಮಾರ್ ಹಾಗೂ ಸೂರ್ಕಳ್ಳಿ ರಾಕೇಶ್ ಬಂಧಿತರು. ಇವರು ಗ್ರಾಮದ ಪಾತಾಳೇಶ್ವರ ದೇವಸ್ಥಾನದ ಬಳಿ ಸಿಗರೇಟ್‌ಗೆ ಗಾಂಜಾ ಪುಡಿ ತುಂಬಿಸಿಕೊಂಡು ಸೇವನೆ ಮಾಡುತ್ತಿದ್ದು, ಈ ವೇಳೆ ಪಿಎಸ್‌ಐ ಅಶೋಕ್ ಸಿಬ್ಬಂದಿಯೊಂದಿಗೆ ಜೀಪ್‌ನಲ್ಲಿ ಗಸ್ತು ಹೋಗುತ್ತಿದ್ದರು. ವಾಹನ ನೋಡಿದ ಇಬ್ಬರೂ ಯುವಕರು ಗಾಬರಿಗೊಂಡು ಓಡಲಾರಂಭಿಸಿದ್ದಾರೆ. ಇವರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಬೆನ್ನತ್ತಿ ಹಿಡಿದು ತಪಾಸಣೆ ಮಾಡಿದಾಗ ಯುವಕರು ಗಾಂಜಾ ಸೇವನೆ ಮಾಡಿರುವುದು ಕಂಡುಬಂದಿದೆ. ಕೂಡಲೇ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಬಂಧಿಸಿದ್ದಾರೆ. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.