ಗಾಂಜಾ ಸಿಕ್ಕರೆ ಗೂಂಡಾ ಕಾಯ್ದೆ

9 KGF 01
Published on

ಕೆಜಿಎಫ್: ಕೆಜಿಎಫ್ ಮಾರಿಕುಪ್ಪಂ ಠಾಣಾ ವ್ಯಾಪ್ತಿಯ ಕೃಷ್ಣಗಿರಿ ಲೈನ್‌ನಲ್ಲಿ ಮಂಗಳವಾರ ಅಂದಾಜು 1 ಕೋಟಿ ರೂ. ಮೌಲ್ಯದ 186 ಕೆಜಿ ಗಾಂಜಾ ಸಾಗಿಸುತ್ತಿದ್ದವರನ್ನು ಮಾಲು ಸಮೇತ ಬಂಧಿಸಿದ ಕೆಜಿಎ್ ಪೊಲೀಸರ ಕರ್ತವ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದ್ದು, ಬಹುಮಾನಕ್ಕೆ ಶಿಫಾರಸು ಮಾಡಲಾಗುವುದು ಎಂದು ಕೇಂದ್ರ ವಲಯ ಐಜಿಪಿ ಸೀಮಂತಕುಮಾರ್ ಸಿಂಗ್ ಹೇಳಿದರು.

ರಾಜ್ಯಾದ್ಯಂತ ಡ್ರಗ್ಸ್ ಮಾಫಿಯಾ ತಡೆಗಟ್ಟುವ ನಿಟ್ಟಿನಲ್ಲಿ 15 ದಿನಗಳಿಂದ ಸರ್ಕಾರ ಹಾಗೂ ಗೃಹ ಸಚಿವರ ಮಾರ್ಗದರ್ಶನದಂತೆ ಜಾಲ ಭೇದಿಸಲಾಗುತ್ತಿದೆ. ಅಪಾರ ಪ್ರಮಾಣದ ಗಾಂಜಾ, ಅಫೀಮು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ತನಿಖೆ ನಡೆಸಲಾಗುತ್ತಿದೆ. ಗಾಂಜಾ ಸರಬರಾಜಿನಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ವಲಯ ವ್ಯಾಪ್ತಿಗೆ ಬೆಂ.ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಕೆಜಿಎಫ್ ಜಿಲ್ಲೆಗಳು ಒಳಪಡಲಿವೆ. ಕೆಜಿಎಫ್ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದು ಅಕ್ರಮಗಳಲ್ಲಿ ತೊಡಗುವವರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಗಾಂಜಾ ಮಾರಾಟ ಮತ್ತು ಸೇವನೆ ಎರಡೂ ಅಪರಾಧ. ಯುವ ಸಮುದಾಯ ಗಾಂಜಾ ಸೇವನೆಯಿಂದ ದೂರವಿರಬೇಕು ಹಾಗೂ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

ನೆರೆಯ ಪೊಲೀಸರೊಂದಿಗೆ ಮಾತುಕತೆ: ಕೇಂದ್ರ ವಲಯ ವ್ಯಾಪ್ತಿಗೆ ಆಂಧ್ರ ಪ್ರದೇಶ ತಮಿಳುನಾಡು ರಾಜ್ಯಗಳ ಗಡಿ ಒಳಪಡಲಿದ್ದು, ಅಪರಾಧ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಗಡಿ ಭಾಗಗಳಲ್ಲಿರುವ ಆಂಧ್ರ ಮತ್ತು ತಮಿಳುನಾಡು ರಾಜ್ಯ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಕೆಜಿಎಫ್ ಜಿಲ್ಲಾ ಪೊಲೀಸ್ ಎಸ್ಪಿ ಇಲಾಕಿಯಾ ಕರುಣಾಕರನ್, ಡಿವೈಎಸ್‌ಪಿ ಉಮೇಶ್, ವೃತ್ತ ನಿರೀಕ್ಷಕರಾದ ಸೂರ್ಯಪ್ರಕಾಶ್, ಮುಸ್ಕಕ್‌ಪಾಷಾ, ತಬರೇ ಅಲಂಪಾಷಾ, ಎಸ್‌ಐ ಆನಂದಬಾಬು, ಜಗದೀಶ್‌ರೆಡ್ಡಿ, ಸಿಬ್ಬಂದಿ ಚೇತನ್‌ಕುಮಾರ್, ಚಲಪತಿ, ಮಹೇಂದ್ರಕುಮಾರ, ಶಿವಯ್ಯ, ಲೋಕೇಶ್ ರೆಡ್ಡಿ, ರಾಘವೇಂದ್ರ, ಸಂಪತ್‌ಕುಮಾರ್, ವೆಂಕಟೇಶಪ್ಪ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net