

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದ ರೈಲ್ವೆ ಸೇತುವೆ ಬಳಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ವಲಯ ಅಬಕಾರಿ ಅಧಿಕಾರಿಗಳು, ಆತನಿಂದ ಒಣ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಪಶ್ವಿಮ ಬಂಗಾಲ ಮೂಲದ, ಪಟ್ಟಣದ ನಿವಾಸಿ ಅಮೀರ್ ಹುಸೇನ್ (24) ಬಂಧಿತ. ಉದ್ಯೋಗ ಹುಡುಕಿಕೊಂಡು ಪಶ್ವಿಮ ಬಂಗಾಲದಿಂದ ಚನ್ನರಾಯಪಟ್ಟಣಕ್ಕೆ ಬಂದ ಅಮೀರ್ ಹುಸೇನ್ ಕೆಲಸ ಹುಡುಕುವುದನ್ನು ಬಿಟ್ಟು ಅಕ್ರಮ ಗಾಂಜಾ ಸಾಗಣೆ ಹಾಗೂ ಮಾರಾಟ ಕೃತ್ಯಕ್ಕೆ ಇಳಿದಿದ್ದ. ಇತ್ತೀಚಿನ ವರ್ಷಗಳಿಂದ ಪಟ್ಟಣ ಸೇರಿದಂತೆ ತಾಲೂಕಿನ ಶ್ರವಣಬೆಳಗೊಳ, ನುಗ್ಗೇಹಳ್ಳಿ, ಬಾಗೂರು ಹಾಗೂ ಹಿರೀಸಾವೆ ಹೋಬಳಿ ಕೇಂದ್ರಗಳು, ಗ್ರಾಮೀಣ ಭಾಗವಷ್ಟೇ ಅಲ್ಲದೆ ಅಕ್ಕಪಕ್ಕದ ತಾಲೂಕಿನ ಗಡಿಭಾಗದ ಪ್ರದೇಶಗಳಲ್ಲಿ ಅಕ್ರಮ ಗಾಂಜಾ ಮಾರಾಟ ದಂಧೆ ವ್ಯಾಪಕವಾಗಿದೆ.
ಇದರ ಜಾಡನ್ನು ಬೆನ್ನತ್ತಿದ ಚನ್ನರಾಯಪಟ್ಟಣ ವಲಯ ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಅ.29 ಶನಿವಾರ ಹಿರೀಸಾವೆ ಗ್ರಾಮದ ರೈಲ್ವೆ ಸೇತುವೆ ಬಳಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಆತನಿಂದ 1 ಲಕ್ಷ ರೂ. ಮೌಲ್ಯದ 1 ಕೆಜಿ 625 ಗ್ರಾಂ ತೂಕದ ಒಣ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಚನ್ನರಾಯಪಟ್ಟಣ ವಲಯದ ಅಬಕಾರಿ ನಿರೀಕ್ಷಕಿ ಎಂ.ಜೆ.ಅನಿತಾ, ಅಬಕಾರಿ ಉಪ ನಿರೀಕ್ಷಕ ಕೆ.ವೈ.ಮಲ್ಲಶೆಟ್ಟಿ, ಸಿಬ್ಬಂದಿ ವೀರಭದ್ರ, ಎನ್.ಎಸ್.ಜೀವನ್, ಎಸ್.ವಿ.ಕರಣಿ, ಕೆ.ಅಭಿಲಾಷ್, ಜಿ.ಎಂ.ಪ್ರದೀಪ್ ಮತ್ತು ವಾಹನ ಚಾಲಕ ಕೆ.ಜೆ.ರಾಜೇಶ್ ಇದ್ದರು.