ಗಾಂಜಾ ವ್ಯಸನಿಗಳ ಹಾವಳಿ ನಿಯಂತ್ರಿಸಿ

9spt1
Published on

ಸೋಮವಾರಪೇಟೆ: ಪಟ್ಟಣದ ಜೂನಿಯರ್ ಕಾಲೇಜು ಆವರಣ ಹಾಗೂ ಆನೆಕೆರೆ ಪಾರ್ಕ್‌ನಲ್ಲಿ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.


ಅಧ್ಯಕ್ಷ ಪಿ.ಕೆ.ಚಂದ್ರು ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಪ.ಪಂ. ಸಾಮಾನ್ಯ ಸಭೆಯಲ್ಲಿ ಶೀಲಾ ಡಿಸೋಜ ಮಾತನಾಡಿ, ಇತ್ತೀಚೆಗೆ ಯುವಕರು ಗಾಂಜಾ ವ್ಯಸನಿಗಳಾಗುತ್ತಿದ್ದು, ಪಾಲಕರು ಆತಂಕಗೊಂಡಿದ್ದಾರೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಯುವ ಸಮೂಹದ ಭವಿಷ್ಯ ಹಾಳಾಗಲಿದೆ. ಜೂನಿಯರ್ ಕಾಲೇಜು ಗೇಟ್‌ನಲ್ಲಿ ಸಿ.ಸಿ.ಕ್ಯಾಮರಾ ಇದ್ದರೂ ಪ್ರಯೋಜನ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು.


ಪಟ್ಟಣದಲ್ಲಿ ಗಾಂಜಾ ವ್ಯಸನಿಗಳು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಅತಿ ವೇಗದಲ್ಲಿ ಬೈಕ್ ಚಲಾಯಿಸುವುದಲ್ಲದೆ, ಹೆಲ್ಮೆಟ್ ರಹಿತರಾಗಿ ಒಂದೇ ಬೈಕ್‌ನಲ್ಲಿ ಮೂವರು ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ. ಈ ಕುರಿತು ಪೊಲೀಸರು ನಿಗಾ ವಹಿಸಬೇಕು ಎಂದು ಶುಭಕರ್ ಒತ್ತಾಯಿಸಿದರು.


ಪಟ್ಟಣದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವುದು ಗೊತ್ತಾಗಬೇಕು. ಸಂಚಾರ ನಿಯಮ ಪಾಲಿಸದ ಸವಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಗಾಂಜಾ ಎಲ್ಲಿಂದ ಪೂರೈಕೆ ಆಗುತ್ತದೆ ಎಂಬುದನ್ನು ಪತ್ತೆಹಚ್ಚಬೇಕು. ದಂಧೆಕೋರರ ಹೆಡೆಮುರಿ ಕಟ್ಟಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.


ಪಟ್ಟಣದ ಹೊಸ ಬಡವಾಣೆಯಲ್ಲಿ 134 ಹಕ್ಕುಪತ್ರ ವಿತರಿಸಲಾಗಿದೆ. ಕೆಲವು ಹಕ್ಕುಪತ್ರ ನಕಲಿ ಎಂಬ ಸಂಶಯವಿದೆ. ಪಂಚಾಯಿತಿಯಲ್ಲಿ ಹಕ್ಕುಪತ್ರ ನಕಲು ಪ್ರತಿ ಇರುತ್ತದೆ. ಅದನ್ನು ಮುಂದಿನ ಸಭೆಯಲ್ಲಿ ಇಡಬೇಕು ಎಂದು ಎಸ್.ಮಹೇಶ್ ತಿಳಿಸಿದರು. ಹಿಂದಿನ ರಾಜಸ್ವ ನಿರೀಕ್ಷಕ ಸುಜಿತ್ ನನಗೆ ಕೊಟ್ಟಿಲ್ಲವೆಂದು ಗುಮಾಸ್ತ ರಫೀಕ್ ಹೇಳಿದರು. ನೀವು ಕೊಡದಿದ್ದರೆ ಕಾನೂನು ಮೂಲಕ ಪಡೆದುಕೊಳ್ಳುವುದು ಗೊತ್ತು ಎಂದು ಮಹೇಶ್ ತಿಳಿಸಿದರು.

ಪಟ್ಟಣ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಹೊಸ ವಿದ್ಯುತ್ ಕಂಬ ಅಳವಡಿಸುವ ಸಂದರ್ಭ ಸೆಸ್ಕ್‌ನವರು ಕಡ್ಡಾಯವಾಗಿ ಪಂಚಾಯಿತಿಯಿಂದ ಎನ್‌ಒಸಿ ಪಡೆದುಕೊಳ್ಳಬೇಕು ಎಂದು ಉಪಾಧ್ಯಕ್ಷ ಸಂಜೀವ, ಸೆಸ್ಕ್ ಇಂಜಿನಿಯರ್‌ಗೆ ತಾಕೀತು ಮಾಡಿದರು. ಆಸ್ಪತ್ರೆಯ ಗೇಟ್ ಮುಂಭಾಗದಲ್ಲಿರುವ ಪಂಚಾಯಿತಿ ನಿವೇಶನದಲ್ಲಿ ಮಹಿಳೆಯರು ಹಾಗೂ ಪ್ರವಾಸಿಗರ ಉಪಯೋಗಕ್ಕಾಗಿ ಹೈಟೆಕ್ ಶೌಚಗೃಹ ನಿರ್ಮಿಸುವಂತೆ ಮೃತ್ಯುಂಜಯ, ಜೀವನ್, ನಾಗರತ್ನ, ಮೋಹಿನಿ, ಬಿ.ಸಿ.ವೆಂಕಟೇಶ್, ಸೋಮೇಶ್ ಅಗ್ರಹಿಸಿದರು. ಬೇಡಿಕೆಗೆ ಅಧ್ಯಕ್ಷ ಪಿ.ಕೆ.ಚಂದ್ರು ಹಾಗೂ ಮುಖ್ಯಾಧಿಕಾರಿ ನಾಚಪ್ಪ ಒಪ್ಪಿಗೆ ಸೂಚಿಸಿ, ನಿರ್ಣಯ ಕೈಗೊಳ್ಳಲಾಯಿತು. ಇದೇ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಯಂತಿ ಶಿವಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಪಟ್ಟಣದ ಹೈಟೆಕ್ ಮಾರುಕಟ್ಟೆ ಪಕ್ಕದಲ್ಲಿ ನಡೆದಿರುವ ರಸ್ತೆ ಕಾಮಗಾರಿ ತೃಪ್ತಿಕರವಾಗಿಲ್ಲ. ಸಾಮಾನ್ಯ ಸಭೆಯಲ್ಲಿ ರಸ್ತೆ ಬಗ್ಗೆ ಚರ್ಚೆಯಾಗಿಲ್ಲ. ಅರ್ಧ ದಿನದಲ್ಲೇ 4 ಲಕ್ಷದ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಈ ಬಗ್ಗೆ ತನಿಖೆಯಾಗಬೇಕು. ಯಾವುದೇ ಕಾರಣಕ್ಕೂ ಬಿಲ್ ನೀಡಬಾರದು ಎಂದು ಶೀಲಾ ಡಿಸೋಜ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಏಜೆನ್ಸಿ ಮೂಲಕ ತನಿಖೆ ನಡೆಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net