ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ, 46 ಕೆ.ಜಿ. ಮಾದಕ ವಸ್ತು ವಶ

16 crime
Published on

ಮೈಸೂರು: ಮಾದಕ ವಸ್ತುಗಳ ಮಾರಾಟದ ವಿರುದ್ಧ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಅವರಿಂದ ಸುಮಾರು 23 ಲಕ್ಷ ರೂ. ಬೆಲೆ ಬಾಳುವ 46 ಕೆ.ಜಿ. 691 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.


ನಗರದ ಸಿಸಿಬಿ ಪೊಲೀಸರು ಇತ್ತೀಚೆಗೆ ಹಲವಾರು ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಮಾರಾಟದ ಜಾಲಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿದ್ದು, ಅದೇ ರೀತಿಯ ಕಾರ್ಯವನ್ನು ಮುಂದುವರಿಸಿದ್ದಾರೆ.


ಖಚಿತ ಮಾಹಿತಿ ಆಧರಿಸಿ ಬನ್ನಿಮಂಟಪದ ಹನುಮಂತನಗರ ರಸ್ತೆಯಲ್ಲಿ ದಾಳಿ ಮಾಡಿ ಅಲ್ಲಿ ಅಕ್ರಮವಾಗಿ ಕಾರಿನೊಳಗಡೆ ಗಾಂಜಾ ಇಟ್ಟುಕೊಂಡು ಗಿರಾಕಿಗಳನ್ನು ಅಲ್ಲಿಗೆ ಕರೆಯಿಸಿಕೊಂಡು ಮಾರಾಟ ಮಾಡುತ್ತಿದ್ದ ಮೂವರನ್ನು ಶನಿವಾರ ಬಂಧಿಸಲಾಯಿತು. ಅವರ ವಶದಲ್ಲಿದ್ದ ಗಾಂಜಾದೊಂದಿಗೆ ಒಂದು ಕಾರ್, 10 ಸಾವಿರ ರೂ. ನಗದು, 3 ಮೊಬೈಲ್ ಫೋನ್‌ಅನ್ನು ಜಪ್ತಿ ಮಾಡಲಾಗಿದೆ.


ಅಂತೆಯೇ ಭಾನುವಾರ ಖಚಿತ ಮಾಹಿತಿ ಆಧರಿಸಿ ಮಂಡಿ ಮೊಹಲ್ಲಾದ 2ನೇ ಈದ್ಗಾದ ಸಿ.ವಿ. ರಸ್ತೆಯಲ್ಲಿ ಮನೆವೊಂದರ ಮೇಲೆ ದಾಳಿ ಮಾಡಿ ಅಲ್ಲಿ ಗಾಂಜಾವನ್ನು ಸಂಗ್ರಹಿಸಿಟ್ಟುಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನ ವಶದಲ್ಲಿದ್ದ 41 ಕೆ.ಜಿ. ತೂಕದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.


ಈ ಆರೋಪಿಗಳು ಗಾಂಜಾವನ್ನು ಎಲ್ಲಿಂದ ಮತ್ತು ಯಾರಿಂದ ಖರೀದಿ ಮಾಡಿಕೊಂಡು ತರುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆ ಕಾರ್ಯವೂ ಮುಂದುವರಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಸಿಸಿಬಿ ಇನ್ಸ್‌ಪೆಕ್ಟರ್ ಎ.ಮಲ್ಲೇಶ್, ಎಎಸ್‌ಐ ರಾಜು, ಸಿಬ್ಬಂದಿ ಅನಿಲ್, ಸುಬಾನಲ್ಲಾ ಬಾಲ್‌ದಾರ್, ಡಿ.ಶ್ರೀನಿವಾಸ ಪ್ರಸಾದ್, ಜೋಸೆಫ್ ನೊರೋನ್ಹ, ರವಿಕುಮಾರ್, ರಾಧೇಶ್, ಜನಾರ್ದನ ರಾವ್, ಕೆ.ಜಿ.ಶ್ರೀನಿವಾಸ್, ಅರುಣ್‌ಕುಮಾರ್, ರಘು, ಮಮತಾ ಕಾರ್ಯಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net