

ಕಾರವಾರ:ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಶಿರಸಿಯ ಹುಲೇಕಲ್ ರಸ್ತೆಯ ನವೀನ ರಾಮಚಂದ್ರ ಚೌಹಾಣ ಮತ್ತು ಗಣೇಶ ನಗರದ ನಿಖಿಲ್ ನಾಗೇಶ ಗೌಡ ಶಿಕ್ಷೆಗೊಳಗಾದ ಅಪರಾಽಗಳು. 2022 ರ ಜುಲೈ ತಿಂಗಳಲ್ಲಿ ಶಿರಸಿಯ ಆನೆ ಹೊಂಡ ಸಮೀಪ 1.54 ಗ್ರಾಂ ಗಾಂಜಾ ಮಾರಾಟ ಮಾಡುವಾಗ ಅವರು ಸಿಕ್ಕಿ ಬಿದ್ದಿದ್ದರು. ಶಹರ ಠಾಣೆಯ ಪಿಎಸ್‌ಐ ರಾಜಕುಮಾರ್ ಉಕ್ಕಲಿ ದಾಳಿ ನಡೆಸಿದ್ದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ, ಡಿಆರ್‌ಎಫ್‌ಒಗಳಾದ ನೂರ್ ಅಹಮದ್ ಮತ್ತು ಹನುಮಂತ ಬಸವಂತಪ್ಪ ಎರಗೇರಿ ಅವರು ದಾಳಿ ಕಾಲಕ್ಕೆ ಪಂಚರಾಗಿದ್ದರು. ಪಿಎಸ್‌ಐ ರತ್ನಾ ಎಸ್.ಕೆ.ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಅವರು ಇಬ್ಬರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಹೊಸ ಪಟ್ಟಣ ವಾದ ಮಂಡಿಸಿದ್ದರು.