

ಹಾಸನ: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜು.30 ರಂದು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ನಗರದ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಪಶ್ಚಿಮ ದಿಕ್ಕಿಗೆ ಇರುವ ಕಾಂಪೌಂಡ್ ಬಳಿ 60ನೇ ಮುಖ್ಯರಸ್ತೆಯ ನಾಮಫಲಕ ಇರುವ ಸ್ಥಳದಲ್ಲಿ ಇಬ್ಬರು ಮಾದಕ ವಸ್ತು ಗಾಂಜಾವನ್ನು ಬೈಕಿನಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಮಾಹಿತಿ ಆಧರಿಸಿ ಸೆನ್ ಠಾಣೆ ಇನ್ಸ್‌ಪೆಕ್ಟರ್ ಅಭಿಜಿತ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದರು.
ಈ ವೇಳೆ ಚಿಕ್ಕ ಗಂಡಸಿ ಗ್ರಾಮದ ಲ್ಯಾಬ್ ಟೆಕ್ನಿಷಿಯನ್ ಸಿ.ಬಿ.ಲವಕುಮಾರ (26), ಗಂಡಸಿ ವಿನಾಯಕ ನಗರದ ಪಿ.ಆರ್.ಶಶಾಂಕ್ (24) ಎಂಬುವರನ್ನು ಬಂಧಿಸಿ, ಅವರ ಬಳಿ ಇದ್ದ 610 ಗ್ರಾಂ ತೂಕದ ಒಣಗಿದ ಗಾಂಜಾ ಸೊಪ್ಪು ಜೊತೆಗೆ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.