

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಸಮೀಪವಿರುವ ಲೊಕ್ಕನಹಳ್ಳಿ ರಸ್ತೆಯಲ್ಲಿ ಅಕ್ರಮವಾಗಿ ಒಣಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಧುವನಹಳ್ಳಿ ಗ್ರಾಮದ ನಿವಾಸಿ ನಟರಾಜು( 48) ಬಂಧಿತ. ಆರೋಪಿ ಮಧುವನಹಳ್ಳಿ ಹೊರವಲಯದಲ್ಲಿರುವ ಲೊಕ್ಕನಹಳ್ಳಿ ರಸ್ತೆಯಲ್ಲಿ ಗಾಂಜಾ ಸಾಗಿಸುತ್ತಿದ್ದ. ಈ ವೇಳೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಬಂಧಿಸಿದೆ. ಆತನ ಬಳಿಯಿಂದ 560 ಗ್ರಾಂ ತೂಕದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಮುಖ್ಯಪೇದೆ ರಂಗಸ್ವಾಮಿ, ನಂಜುಂಡಸ್ವಾಮಿ, ಶಿವಕುಮಾರ್, ಮನೋಹರ್, ಚಿಕ್ಕಣ್ಣ ಇದ್ದರು.