

ಹುಬ್ಬಳ್ಳಿ: ಇಲ್ಲಿನ ಶಿವಳ್ಳಿ ರಸ್ತೆಯ ರೈಲ್ವೆ ಬ್ರಿಡ್ಜ್ ಬಳಿ ಶುಕ್ರವಾರ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ, ಅವರಿಂದ 82,500 ರೂ. ಮೌಲ್ಯದ 1 ಕೆ.ಜಿ. 650 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಧಾರವಾಡ ಹರಿಜನಕೇರಿ ಓಣಿ ನಿವಾಸಿ ರವಿ ಕಮಲದಾಸ ಎಲಿಗಾರ (22) ಹಾಗೂ ಸನ್ಮತಿ ನಗರದ ಸುನೀಲ ಆನಂದ ನಂದಿಹಳ್ಳಿ ಬಂಧಿತರು. ಖಚಿತ ಮಾಹಿತಿ ಮೇರೆಗೆ ಅಶೋಕನಗರ ಠಾಣೆ ಇನ್ಸ್ಪೆಕ್ಟರ್ ರವಿಚಂದ್ರ ಡಿ.ಬಿ. ನೇತೃತ್ವದ ತಂಡ ದಾಳಿ ನಡೆಸಿದೆ. ಕಳೆದ ವಾರ ಮೂವರು ಗಾಂಜಾ ಮಾರಾಟಗಾರರನ್ನು ಬಂಧಿಸಲಾಗಿತ್ತು. ಆ ತಂಡದ ರವಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಿರಿ ನಗರದಲ್ಲಿ ಗಲಾಟೆ ಮಾಡಿದ್ದ 9 ಪುಂಡರ ಬಂಧನ
ಹುಬ್ಬಳ್ಳಿ: ಇಲ್ಲಿಯ ಮುರಾರ್ಜಿನಗರ ಬಳಿಯ ಗಿರಿನಗರದಲ್ಲಿ ಸೆ. 13ರಂದು ನಿರ್ಮಾಣ ಹಂತದ ಕಟ್ಟಡದಲ್ಲಿ ಕಳ್ಳತನಕ್ಕೆ ಯತ್ನಿಸಿ, ಅದನ್ನು ಪ್ರಶ್ನಿಸಿದ್ದ ಅಣ್ಣ- ತಂಗಿ ಮೇಲೆ ಹಲ್ಲೆ ಮಾಡಿ ಬೈಕ್ ಸುಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು 9 ಆರೋಪಿಗಳನ್ನು ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿ ಆನಂದನಗರದ ರಾಕೇಶ ಮೇದಾರ (22), ಶಿವರಾಜ ಮಿಶ್ರಿಕೋಟಿ (22), ರೋಹನ ಬೀಳಗಿ (19), ಅಂಬೇಡ್ಕರ್ ಕಾಲನಿಯ ರಮೇಶ ಅಂಬಿಗೇರ (18), ಅಕ್ಷಯ ಕಲಘಟಗಿ (23), ಯಲ್ಲಪ್ಪ ಕೋಟಿ (18), ಪ್ರಕಾಶ ಮೋರೆ (20), ವಿನಾಯಕ ಕುಪ್ಪಸಗೌರ (19), ಮಂಜುನಾಥ ಬ್ಯಾಹಟ್ಟಿ (22) ಬಂಧಿತರು.
ವಿನಯ ದೇಸಾಯಿ ಎಂಬುವರ ಮನೆ ಪಕ್ಕದಲ್ಲಿ ಸಂಬಂಧಿಕರ ಮನೆ ನಿರ್ಮಾಣ ಮಾಡಲಾಗುತ್ತಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ನೀರಿನ ಪಂಪ್ಅನ್ನು ಕೆಲ ಪುಂಡರು ಕಳವು ಮಾಡಲು ಯತ್ನಿಸಿದ್ದರು. ಅದನ್ನು ಪ್ರಶ್ನಿಸಿ ಹಿಂಬಾಲಿಸಿಕೊಂಡು ಹೋಗಿದ್ದ ವಿನಯ ಹಾಗೂ ಸಹೋದರಿ ಅರ್ಚನಾ ಮೇಲೆ ಹಲ್ಲೆ ನಡೆಸಿ, ಬೈಕ್ ಸುಟ್ಟು ಹಾಕಿ ಅಟ್ಟಹಾಸಗೈದು ಪರಾರಿಯಾಗಿದ್ದರು. ಈ ಕುರಿತು ಸಾರ್ವಜನಿಕರಿಂದ ಭಾರಿ ಆಕ್ರೋಶ ಉಂಟಾಗಿತ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.