

ಮಂಡ್ಯ: ನಾಗಮಂಗಲ ಪಟ್ಟಣದ ಮುಳುಕಟ್ಟೆ ರಸ್ತೆಯಲ್ಲಿರುವ ನಂಜುಂಡೇಶ್ವರ ದೇವಾಲಯದ ಎದುರು ಗಾಂಜಾ ಸೊಪ್ಪನ್ನು ಪೊಟ್ಟಣ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪಟ್ಟಣ ಠಾಣೆ ಪೊಲೀಸರು ಗುರುವಾರ ದಾಳಿ ನಡೆಸಿ ಬಂಧಿಸಿದ್ದಾರೆ.
ಪಟ್ಟಣದ ಸುಭಾಷ್‌ನಗರದ ನಿವಾಸಿ ಸೈಯದ್ ಫರ್ಮಾನ್(55) ಬಂಧಿತ. ಈತ ದೇವಾಲಯದ ಮುಂಭಾಗ ನಿಂತು ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಬಿ.ಅಶೋಕ್‌ಕುಮಾರ್ ದಾಳಿ ನಡೆಸಿ ಆರೋಪಿಯ ಬಳಿಯಿದ್ದ 500 ಗ್ರಾಂ ತೂಕದ 21,500 ರೂ. ಮೌಲ್ಯದ ಗಾಂಜಾ ಸೊಪ್ಪಿನ ಪ್ಯಾಕೆಟ್‌ಗಳನ್ನು ಹಾಗೂ 600 ರೂ. ನಗದನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಎಸ್‌ಐ ಬಿ.ಜೆ.ರವಿ, ಸಿಬ್ಬಂದಿ ಗುರುಪ್ರಸಾದ್, ರಮೇಶ್, ಕೃಷ್ಣ, ಗಂಗಾಧರ್, ಉಮೇಶ್, ಹನುಮಂತ, ಬಸವರಾಜು ಸೇರಿದಂತೆ ಮತ್ತಿತರರಿದ್ದರು.