ಗಾಂಜಾ ಮತ್ತಿನಲ್ಲಿ ಮಹಿಳಾ ಎಎಸ್​ಐಗೆ ಚಾಕು ಇರಿತ

Published on

ಜಾರ್ಖಂಡ್​ ಮೂಲದ ಆರೋಪಿ ಬಂಧನ, ಗಸ್ತಿನಲ್ಲಿದ್ದಾಗಲೇ ಕೃತ್ಯ, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ

ಬಂಗಾರಪೇಟೆ: ಪಟ್ಟಣದಲ್ಲಿ ಸೋಮವಾರ ರಾತ್ರಿ ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಮಹಿಳಾ ಎಎಸ್​ಐಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಬಂಗಾರಪೇಟೆ ಠಾಣೆಯ ಎಎಸ್​ಐ ಫರಿದಾಬಾನು ಗಾಯಾಳು. ಪಟ್ಟಣದ ಜೂನಿಯರ್​ ಕಾಲೇಜು ಬಳಿ ಹಾಡು ಹಗಲೇ ಲಾಂಗು ಮಚ್ಚುಗಳಿಂದ ಸಂಜೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ, ಅದೇ ದಿನ ರಾತ್ರಿ ಕರ್ತವ್ಯ ನಿರತ ಮಹಿಳಾ ಎಎಸ್​ಐ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ. ರಿದಾಬಾನು ಅವರು ರಾತ್ರಿ ಗಸ್ತಿನಲ್ಲಿದ್ದಾಗ ಜಾರ್ಖಂಡ್​ ಮೂಲದ ಅಜಯ್​ಸಿಂಗ್​ ಎಂಬಾತ ಏಕಾಏಕಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ಫರಿದಾಬಾನು ಅವರ ಎರಡೂ ಕೈಗಳಿಗೆ ಗಾಯಗಳಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಆರೋಪಿ ಅಜಯ್​ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net