ಗಾಂಜಾ ಮತ್ತಲ್ಲಿ ನಾಲ್ವರಿಗೆ ಚಾಕು ಇರಿತ

Crime
Published on


ಚಿತ್ರದುರ್ಗ: ಆ ಗ್ರಾಮದಲ್ಲಿ ಹಬ್ಬದ ಸಡಗರ ಎಲ್ಲರ ಮನೆಯಲ್ಲಿ ತುಂಬಿ ತುಳುಕುತ್ತಿತ್ತು. ಆದರೆ, ಗಾಂಜಾ ಮತ್ತು ಮದ್ಯದ ಮತ್ತಲ್ಲಿ ಮಾಡಿದ ಒಂದು ಅನಾಹುತದಿಂದ ಊರಿಗೆ ಊರೇ ಬೆಚ್ಚಿ ಬೀಳುವಂತ್ತಾಗಿದೆ‌.

ಹೌದು.. ಎಲ್ಲಿ ಅಂತ್ತೀರಾ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗೊಲ್ಲರಹಟ್ಟಿಯಲ್ಲಿ ಉಡುಸಲಮ್ಮ ದೇವಿಯ ಜಾತ್ರೆ ವೇಳೆ. ಆ ಒಂದು ಸಂದರ್ಭದಲ್ಲಿ ಗಾಂಜಾ ಸೇವನೆ ಮತ್ತಿನಲ್ಲಿ ಅದೇ ಗ್ರಾಮದ ವ್ಯಕ್ತಿ ವೀರೇಶ್ ಗ್ರಾಮದ ನಾಲ್ವರಿಗೆ ಮಂಗಳವಾರ ರಾತ್ರಿ ಚಾಕು ಇರಿದು ತಲೆಮರಿಸಿಕೊಂಡಿದ್ದಾರೆ.

ಐದು ವರ್ಷಕ್ಕೊಮ್ಮೆ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸುವಂತಹ ಉಡುಸಲಮ್ಮ ದೇವಿಯ ಜಾತ್ರಾಮಹೋತ್ಸವದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ವೀರೇಶ್ ಎಂಬಾತ ಪವನ್ ಕಲ್ಯಾಣ, ಮಂಜುನಾಥ್, ಮಾರುತಿ, ಮತ್ತೊಬ್ಬ ಯುವಕನಿಗೆ ಚಾಕು ಇರಿದು ತಲೆ ಮರಿಸಿಕೊಂಡಿದ್ದಾನೆ.

ಹೊಟ್ಟೆ, ಬೆನ್ನು, ಭುಜ, ಕಿವಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಭಾಗದಲ್ಲಿ ಚೂರಿ ಇರಿದಿದ್ದಾನೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net