

ಹನೂರು: ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಲತ್ತೂರು ಗ್ರಾಮದಲ್ಲಿ ಗುತ್ತಿಗೆ ಪಡೆದ ಜಮೀನೊಂದರಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಲತ್ತೂರು ಗ್ರಾಮದ ಸೆಲ್ವನ್ (52) ಬಂಧಿತ ಆರೋಪಿ. ಈತ ಗ್ರಾಮದ ನಟೇಶ್ ಎಂಬುವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದು, ಅಕ್ರಮವಾಗಿ ಗಾಂಜಾವನ್ನು ಬೆಳೆದಿದ್ದನು. ಈ ಬಗ್ಗೆ ಬೆಳಗ್ಗೆ 10.15ರಲ್ಲಿ ದೊರೆತ ಖಚಿತ ಮಾಹಿತಿ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ಲೋಕೇಶ್ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಜಮೀನಿನ ಮೇಲೆ ದಾಳಿ ನಡೆಸಿದಾಗ ಗಾಂಜಾ ಬೆಳೆದಿರುವುದು ದೃಢಪಟ್ಟಿದೆ. ಬಳಿಕ ಒಟ್ಟು 26.48 ಕೆ.ಜಿ. ತೂಕವುಳ್ಳ 85 ಗಾಂಜಾ ಗಿಡವನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಸಿಬ್ಬಂದಿ ಮಂಜು, ಲಿಯಾಖತ್ ಆಲಿಖಾನ್, ಪರಶುರಾಮ್, ರಾಜು ಹಾಗೂ ಗಿರೀಶ್ ಭಾಗವಹಿಸಿದ್ದರು.