

ವಿಜಯವಾಣಿ ಸುದ್ದಿಜಾಲ ಶಿರಸಿ: ಇಲ್ಲಿನ ಸಹ್ಯಾದ್ರಿ ತಗ್ಗಿನ ಬಳಿ ಗುರುವಾರ ಪತ್ತೆಯಾದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಮತ್ತೆ ಮೂವರನ್ನು ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಇಲ್ಲಿನ ಪೊಲೀಸರು ಕೆ.ಎಚ್.ಬಿ ಕಾಲನಿಯ ಪೃಥ್ವಿ, ಮರಾಠಿಕೊಪ್ಪದ ಗಣೇಶ ಹಾಗೂ ಮಣಿಕಂಠ ಕೋಡಿಯಾ ಬಂಧಿಸಿದ್ದಾರೆ. ಪ್ರಕರಣದ ತನಿಖೆ ತೀವ್ರ ಗೊಂಡಿದ್ದು ಆರೋಪಿತರ ಸಂಪರ್ಕದಲ್ಲಿರುವ ಸಂಶಯಾಸ್ಪದರ ಮಾಹಿತಿ ಸಂಗ್ರಹಿಸುತ್ತಿದ್ದು ಹಲವು ವ್ಯಕ್ತಿಗಳ ಬಂಧನವಾಗುವ ಸಾಧ್ಯತೆ ಇದೆ.
ನಗರ ತ್ಯಜಿಸಿದ ವ್ಯಸನಿಗಳು: ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತರ ಸಂಪರ್ಕದಲ್ಲಿರುವ ಗಾಂಜಾ ಮಾದಕ ವ್ಯಸನಿಗಳು ನಗರದಿಂದ ಕಾಲ್ಕಿತ್ತಿದ್ದಾರೆ. ಗಾಂಜಾ ವ್ಯಸನಿಗಳ ಜಾಡು ಹಿಡಿದಿದ್ದು, ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.