

ಹಾಸನ: ತಾಲೂಕು ಗವೇನಹಳ್ಳಿ ಗ್ರಾಮದಲ್ಲಿ ಶನಿವಾರ ‘ಪ್ಲಾಸ್ಟಿಕ್ ಬಂಧನ ಪರಿಸರ ಸ್ಪಂದನ’ ಜಾಥಾ, ಪ್ಲಾಸ್ಟಿಕ್ ಸಂಗ್ರಹ, ವರ್ಗೀಕರಣ ಮತ್ತು ಬಾಟಲಿ ಇಟ್ಟಿಗೆಗಳ ನಿರ್ಮಾಣ ಎಂಬ ನೂತನ ಚಟುವಟಿಕೆ ನಡೆಯಿತು.
ಶನಿವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಬೂವನಹಳ್ಳಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಒಟ್ಟಾಗಿ ಗವೇನಹಳ್ಳಿ ಗ್ರಾಮದ ಬೀದಿಗಳಲ್ಲಿ ತಂಡ ತಂಡವಾಗಿ ತೆರಳಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಮಾಲಿನ್ಯದ ಅಪಾಯಗಳ ಕುರಿತು ತಿಳಿಹೇಳಿ, ಅವರಿಂದ ಪ್ಲಾಸ್ಟಿಕ್ ಸಂಗ್ರಹಿಸಿದರು. 9 ಗುಂಪುಗಳಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ಕಸವನ್ನು ಗ್ರಾಮದ ದೇವಸ್ಥಾನದ ಮುಂದೆ ಮರುನವೀಕರಿಸಬಹುದಾದ ಮತ್ತು ಮರುನವೀಕರಿಸಲಾಗದ ಪ್ಲಾಸ್ಟಿಕ್ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಯಿತು.
ಮರುನವೀಕರಿಸಲಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ ಪ್ಲಾಸ್ಟಿಕ್ ಇಟ್ಟಿಗೆಗಳನ್ನು ತಯಾರಿಸಲಾಯಿತು. ಮರುನವೀಕರಿಸಬಹುದಾದ ಪ್ಲಾಸ್ಟಿಕ್ ಅನ್ನು ಒಟ್ಟು ಮಾಡಿ ಚೀಲಗಳಲ್ಲಿ ಪ್ರತ್ಯೇಕವಾಗಿ ತುಂಬಿಡಲಾಯಿತು. ಈ ಸಾಮೂಹಿಕ ಪ್ರಕ್ರಿಯೆಯಲ್ಲಿ ಸುಮಾರು 65 ಪ್ಲಾಸ್ಟಿಕ್ ಇಟ್ಟಿಗೆಗಳು ಹಾಗೂ ನಾಲ್ಕು ಚೀಲ ನವೀಕರಿಸಬಹುದಾದ ಪ್ಲಾಸ್ಟಿಕ್ ಸಂಗ್ರಹಿಸಿ ಶಾಲೆಯ ಗೋದಾಮಿನಲ್ಲಿ ಇಡಲಾಯಿತು.
ಬೂವನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಮಾತನಾಡಿ, ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿ ಬಾಟಲಿ ಒಳಗಡೆ ತುಂಬಿ ಅದನ್ನು ಇಟ್ಟಿಗೆಯ ರೂಪದಲ್ಲಿ ಬಳಸುವ ಯೋಜನೆ ಅತ್ಯಂತ ಪರಿಸರ ಪೂರಕ ಹಾಗೂ ಆಕರ್ಷಕ ಕ್ರಿಯೆಯಾಗಿದೆ. ಇದನ್ನು ಪ್ರತಿ ಮನೆಯಲ್ಲಿ ಮಾಡಿದರೆ ಇಡೀ ವ್ಯವಸ್ಥೆಗೆ ತಲೆ ನೋವಾಗಿರುವ ಪ್ಲಾಸ್ಟಿಕ್ ಕಸವನ್ನು ನಿಯಂತ್ರಿಸುವ ಅತ್ಯಂತ ಪರಿಣಾಮಕಾರಿ ಹಾಗೂ ಪ್ರಜ್ಞಾಪೂರ್ವಕ ಪರಿಹಾರ ಸಿಗಲಿದೆ. ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲ ಗ್ರಾಮಗಳಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಯೋಜನೆ (ಎನ್‌ಆರ್‌ಎಲ್‌ಎಂ) ಸಹಾಯಕ ಯೋಜನಾಧಿಕಾರಿ ಎಚ್. ರವಿ ಮಾತನಾಡಿ, ಕಸವನ್ನು ರಸ ಮಾಡುವ ಸರಳ ಮತ್ತು ಆಕರ್ಷಕ ಚಟುವಟಿಕೆ ಇದಾಗಿದೆ. ಪ್ರತಿ ಮನೆಯಲ್ಲಿ ಬಿಡುವಿನ ಸಮಯದಲ್ಲಿ ಇಂತಹ ಚಟುವಟಿಕೆ ನಡೆಸಿದರೆ ಪ್ಲಾಸ್ಟಿಕ್ ಕಸದ ಸಮಸ್ಯೆ ನಿವಾರಣೆ ಆಗುವುದಲ್ಲದೆ, ಮರುನವೀಕರಿಸಬುಹುದಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಾರಿ ಒಂದಷ್ಟು ಹಣವನ್ನೂ ಮಾಡಿಕೊಳ್ಳಬಹುದು ಎಂದರು.
ಕಸ ವಿಂಗಡಣೆ ಮಾಡುವ ವಿಧಾನವನ್ನು ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ, ಉಪಾಧ್ಯಕ್ಷ ಡಾ. ಮಂಜುನಾಥ್, ಸಹಕಾರ್ಯದರ್ಶಿ ನಾಗೇಶ್ ಮತ್ತು ಜಿಲ್ಲಾ ಸಮಿತಿ ಸದಸ್ಯೆ ಮೋನಿಕಾ ಪ್ರಾಯೋಗಿಕವಾಗಿ ತಿಳಿಸಿದರು. ಜಾಥಾ ಸಂಚಾಲನೆಯನ್ನು ಗವೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಇಕೋ ಕ್ಲಬ್ ಸಂಚಾಲಕಿ ಭಾರತಿ ಮತ್ತು ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ವೇಣುಗೋಪಾಲ್ ಮಾಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ, ಕ್ಲಿಯರ್ ಇನ್ ಸಂಸ್ಥೆಯ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.