ಗವಿಮಠದಲ್ಲಿ ತೆಪ್ಪೋತ್ಸವ, ಶಮಿಪೂಜೆ ಇಂದು

Published on

ಹಲಗೂರು: ಸಮೀಪದ ಡಿ.ಹಲಸಹಳ್ಳಿ ಬಳಿ ಇರುವ ಶ್ರೀ ಷಡಕ್ಷರದೇವ ಕ್ಷೇತ್ರ ಗವಿಮಠದಲ್ಲಿ ಅ.1ರಂದು ತೆಪ್ಪೋತ್ಸವ ಮತ್ತು ಶಮಿಪೂಜೆಗೆ ಸಕಲ ಸಿದ್ಧತೆ ನಡೆಸಲಾಗಿದೆ.

ಮಠದ ವಿಶೇಷವೆಂದರೆ ಕಾಶಿಯಲ್ಲಿರುವ ಏಕದಳ ಬಿಲ್ವಪತ್ರೆ ಮರ ಹೊರೆತುಪಡಿಸಿದರೆ ಈ ಗವಿಮಠದಲ್ಲೇ ಏಕದಳ ಬಿಲ್ವಪತ್ರೆ ಮರ ಇರುವುದು. ಬುಧುವಾರ ನಡೆಯುವ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ತೋಟಹಳ್ಳಿ ಮಠದ ಶ್ರೀ ಬಸವ ಸ್ವಾಮೀಜಿ, ಕೋಡಿಹಳ್ಳಿ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಗವಿಮಠದ ಶ್ರೀ ಷಡಕ್ಷರದೇವ ಸ್ವಾಮೀಜಿ ನೇತೃತ್ವದಲ್ಲಿ ಮಠದ ಹಿಂಭಾಗದಲ್ಲಿರುವ ಐತಿಹಾಸಿಕ ಬನ್ನಿ ಮರಕ್ಕೆ ಬೆಳಗಿನ ಜಾವ ವಿಶೇಷ ಪೂಜೆ ನಡೆಸಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಮಠದ ಅವರಣದಲ್ಲಿರುವ ಕಟ್ಟೆಯಲ್ಲಿ ಮಳವಳ್ಳಿ ಅಂಬಿಗರ ಚೌಡಯ್ಯನ ಕೇರಿಯ ಯಜಮಾನರು ಮತ್ತು ಭಕ್ತರು ತೆಪ್ಪೋತ್ಸವ ನಡೆಸಿ ಕೊಡಲಿದ್ದಾರೆ.

ಮಧ್ಯಾಹ್ನ 11 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಒಕ್ಕಲಿಗರ ಸಂಘದ ನಿರ್ದೇಶಕ ಡಿ.ಉಮಾಪತಿ ಉದ್ಘಾಟಿಸಲಿದ್ದು, ಸಮಾಜ ಸೇವಕಿ ಉಮಾದೇವಿ, ಎಂ.ಸಿ.ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ.ಹಲಸಹಳ್ಳಿ ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ 2024-25 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಾಸವಿ ಆಸ್ಪತ್ರೆ ವತಿಯಿಂದ ಹೃದಯ ತಪಾಸಣೆ, ಮೂಳೆ ಚಿಕಿತ್ಸೆ, ಮಧುಮೇಹ, ರಕ್ತದೊತ್ತಡ, ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ತಪಾಸಣೆ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಗವಿಮಠದ ಪೀಠಾಧ್ಯಕ್ಷರಾದ ಶ್ರೀ ಷಡಕ್ಷರಿ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net