

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂ. ಪುಟ್ಟರಾಜ ಗವಾಯಿಗಳು ಪ್ರಾತಃ ಸ್ಮರಣೀಯರು. ಸಂಗೀತ ಕ್ಷೇತ್ರಕ್ಕೆ ಅಸಂಖ್ಯಾತ ಶಿಷ್ಯರನ್ನು ಕೊಡುಗೆಯಾಗಿ ನೀಡಿದ್ದಾರೆ. ಗುರು ಎಂಬ ಶಬ್ದಕ್ಕೆ ಪಾವಿತ್ರೃತೆ ತಂದ ಅವರು, ಸಂಗೀತ ಪರಂಪರೆ ಉಳಿಸಿ ಬೆಳೆಸಿದ ಮಹಾನ್ ಚೇತನ ಎಂದು ನಿವೃತ್ತ ಜಿಲ್ಲಾ ಸರ್ಜನ್ ಡಾ. ಆರ್.ಜಿ. ಪುರಾಣಿಕ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೆ ಹಾಗೂ ಸಂಗೀತೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಇಂದು ರಾಜ್ಯ, ದೇಶಾದ್ಯಂತ ಪಂ. ಪುಟ್ಟರಾಜ ಗವಾಯಿಗಳ ಸ್ಮರಣೆಯಲ್ಲಿ ಸಂಗೀತ ಕಾರ್ಯಕ್ರಮ ಜರುಗುತ್ತಿರುವುದು ಹೆಮ್ಮೆ ಸಂಗತಿ. ಸಂಗೀತ ಕ್ಷೇತ್ರಕ್ಕೆ ಧಾರವಾಡದ ಕೊಡುಗೆ ಅಪಾರ. ಇಂತಹ ಕಲಾ ಪರಂಪರೆ ಉಳಿಸಿ, ಬೆಳೆಸುವ, ಗೌರವಿಸುವ ಸಮಾಜ ನಿರ್ಮಾಣವಾಗಬೇಕಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಮಹಾಬಳೇಶ್ವರ ಹಾಸಿನಾಳ, ಉಪಾಧ್ಯಕ್ಷ ಶಂಕರ ಕುಂಬಿ, ಕಾರ್ಯದರ್ಶಿ ಪಂ.ಎಂ. ವೆಂಕಟೇಶಕುಮಾರ, ಪಂ.ಬಿ.ಎಸ್.ಮಠ, ಪಂ.ಶ್ರೀಪಾದ ಹೆಗಡೆ, ಡಾ. ಎಸ್.ಪಿ. ಬಳಿಗಾರ, ರಾಚಯ್ಯ ಹಿರೇಮಠ, ಕುಮಾರ ಬೆಕ್ಕೇರಿ, ಉಸ್ತಾದ್ ಶಫಿಕಖಾನ್, ಡಾ.ಉದಯಕುಮಾರ ದೇಸಾಯಿ, ರೇಣುಕಾ ನಾಕೋಡ, ಡಾ.ಎ.ಎಲ್.ದೇಸಾಯಿ, ಬಸಯ್ಯಸ್ವಾಮಿ ಹಿರೇಮಠ, ಅಯ್ಯಪ್ಪಯ್ಯ ಹಲಗಲಿಮಠ, ಡಾ.ಬಸವರಾಜ ಕಲೆಗಾರ, ಇತರರು ಇದ್ದರು.
ಶಶಿಕಲಾ ದಾನಿ ಜಲ ತರಂಗ ವಾದನದಲ್ಲಿ ರಾಗ ಯಮನ್ ಪ್ರಸ್ತುತಪಡಿಸಿದರು. ಶ್ರೀಹರಿ ದಿಗ್ಗಾಂವಿ ತಬಲಾ ಸಾಥ್ ನೀಡಿದರು. ಕುಮಾರ ಮರಡೂರ ಗಾಯನಕ್ಕೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಹಾಗೂ ಹಾಮೋನಿಯಂದಲ್ಲಿ ಗುರುಪ್ರಸಾದ ಹೆಗಡೆ ಸಾಥ್ ನೀಡಿದರು.
ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು. ಡಾ.ಅರ್ಜುನ ವಠಾರ ವಂದಿಸಿದರು.