‘ಗವರ್ನಮೆಂಟ್ ಆನ್ ವೀಲ್’ ಯೋಜನೆಗೆ ಸದ್ಯದಲ್ಲೇ ಚಾಲನೆ : ಶಾಸಕ ಎಸ್.ಎ. ರಾಮದಾಸ್

mla s.a. ramdas
Published on

ಮೈಸೂರು: ಯುವ ಸಮೂಹ ಹಾಗೂ ವಿದ್ಯಾರ್ಥಿಗಳಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ನೀಡುವ ಸಲುವಾಗಿ ಸದ್ಯದಲ್ಲೇ ‘ಗವರ್ನಮೆಂಟ್ ಆನ್ ವೀಲ್’ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.

ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯಾಭಿವೃದ್ದಿ ಕಚೇರಿ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕೌಶಲ್ಯ ತರಬೇತಿ, ಉದ್ಯೋಗ ಮಾಹಿತಿ ಹಾಗೂ ನೇಮಕಾತಿ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು, ಯುವ ಸಮೂಹಕ್ಕೆ ಸರ್ಕಾರ ನೀಡಿರುವ ಯೋಜನೆಗಳು, ವಿದ್ಯಾರ್ಥಿ ವೇತನಗಳು, ಉದ್ಯೋಗವಕಾಶದ ಬಗೆಗಿನ ಮಾಹಿತಿಯನ್ನು ಒಂದು ಬಟನ್ ಒತ್ತುವ ಮೂಲಕ ಪಡೆಯಬಹುದು. ಅಂತಹ ಒಂದು ವ್ಯವಸ್ಥೆಯನ್ನು ಸದ್ಯದಲ್ಲೇ ಯುವಸಮೂ ಹಕ್ಕಾಗಿ ನೀಡಲಾಗುವುದು ಎಂದರು.

ಕೆಲಸಕ್ಕೆಂದು ಕೆನಡಾಕ್ಕೆ ಹೋದ ರೈತರು ಇಂದು ಅಲ್ಲಿನ ಭೂಮಾಲೀಕರಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಅವರು ಇಲ್ಲಿ ಪಡೆದ ಕೌಶಲ್ಯ ತರಬೇತಿ. ಕೌಶಲ್ಯ ಪಡೆಯುವುದು ಎಷ್ಟು ಮುಖ್ಯವೋ ಕೆಲಸ ನೀಡುವ ಉದ್ಯಮಿ ಆಗುವುದು ಕೂಡ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟರು.

ನಾವು ನಡೆಸುತ್ತಿರುವ 8ನೇ ಮೇಳ ಇದಾಗಿದೆ. ಕಳೆದ ವರ್ಷ ಹಮ್ಮಿಕೊಂಡಿದ್ದ ಮೇಳದಲ್ಲಿ 10 ಸಾವಿರ ಯುವಜನರು ಉದ್ಯೋಗ ಪಡೆದುಕೊಂಡರು. ಕೋವಿಡ್ ವೇಳೆ ಕೆಲಸ ಕಳೆದುಕೊಂಡವರಿಗೆ ಅಂದು ಮರುಜೀವ ಬಂದಿತ್ತು. ನೀವೆಲ್ಲರೂ ಭಾರತ ದೇಶದ ಭವಿಷ್ಯ ಬರೆಯುವವರು. ಹಾಗಾಗಿ ಎಲ್ಲರೂ ಕೌಶಲ್ಯ ಪಡೆಯುವತ್ತ ಗಮನ ಹರಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೆಣ್ಣುಮಕ್ಕಳಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿದೆ. ವಿಶೇಷವಾಗಿ ಹತ್ತು ಕೋಟಿ ರೂ.ವರೆಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಲಾಗುತ್ತಿದೆ. ಈ ಸಾಲ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಚಲನಚಿತ್ರ ನಟರಾದ ಅಜಯ್‌ರಾವ್, ಪವನ್ ತೇಜ, ಮೇಯರ್ ಶಿವಕುಮಾರ್, ಉಪಮೇಯರ್ ಡಾ. ಜಿ.ರೂಪಾ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ಶಿವಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ವಡೀವೇಲು, ನಗರಪಾಲಿಕೆ ಸದಸ್ಯರಾದ ಶಾರದಮ್ಮ, ಛಾಯಾದೇವಿ, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ನಜೀಯಾ ಸುಲ್ತಾನ್, ರಾಜೇಶ್ ಜಾದವ್, ಉದ್ಯೋಗ ಇಲಾಖೆಯ ಅಧಿಕಾರಿಗಳಾದ ರಾಣಿ, ಜುಲ್ಫೀಕರ್, ಕೌಶಲ್ಯ ಇಲಾಖೆಯ ಜಿಲ್ಲಾ ಅಧಿಕಾರಿ ನಾರಾಯಣ ಮೂರ್ತಿ ಹಾಗೂ ಇತರರು ಇದ್ದರು

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಹಮ್ಮಿಕೊಂಡಿದ್ದ ನೇಮಕಾತಿ ಮೇಳದಲ್ಲಿ 150 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. 5478 ಯುವಕರು, 3251 ಯುವತಿಯರು ಸೇರಿದಂತೆ ಒಟ್ಟು 8729 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಸ್ಥಳದಲ್ಲೇ 1867 ಯುವಕರು, 628 ಯುವತಿಯರು ಸೇರಿದಂತೆ ಒಟ್ಟು 2505 ಜನರು ಉದ್ಯೋಗ ಪಡೆದರು ಕೌಶಲ್ಯ ತರಬೇತಿಗೆ 652 ಯುವಕರು, 248 ಯುವತಿಯರು ಸೇರಿದಂತೆ ಒಟ್ಟು 900 ಜನರು ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net