

ಆನೇಕಲ್: ಮನುಷ್ಯ ಸಂಪಾದನೆ ಮಾಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಿಡಬೇಕು. ಇದರಿಂದಾಗಿ ಎಲ್ಲರೂ ಕೂಡ ಸಮಾನರಂತೆ ಬದುಕಲು ಸಾಧ್ಯವಾಗುತ್ತದೆ ಎಂದು ದಾನಿ ಚಿಕ್ಕ ತಿರುಪತಿಯ ಶ್ರೀನಿವಾಸನ್ ಸ್ವಾಮಿ ಹೇಳಿದರು.
ಪಟ್ಟಣದ ಎಎಸ್‌ಬಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಶಾಲೆ ಕಟ್ಟಡದ ದುರಸ್ತಿಗೆ ಸಹಕಾರ ನೀಡಿ ಮಾತನಾಡಿದರು.
ನಾನು ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದು, ಪಟ್ಟಣದಲ್ಲಿರುವ ಸರ್ಕಾರಿ ಶಾಲೆ ದುಸ್ಥಿತಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಬೇಕಾದ ನೆರವು ನೀಡಲು ಮುಂದಾಗಿದ್ದೇನೆ ಎಂದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ ಮಾತನಾಡಿ, ಪಟ್ಟಣದ ಸರ್ಕಾರಿ ಎಎಸ್‌ಬಿ ಪದವಿ ಪೂರ್ವ ಕಾಲೇಜು ಹಾಗೂ ಶಾಲೆ ದುರಸ್ತಿಗೆ ಹಳೆಯ ವಿದ್ಯಾರ್ಥಿಗಳ ತಂಡ ಮುಂದಾಗಿದೆ. ಈ ಶಾಲೆಯ ಉಳಿವಿಗೆ ದಾನಿಗಳ ಸಹಕಾರ ಅಗತ್ಯವಿದೆ ಎಂದರು.
ಪ್ರಾಂಶುಪಾಲ ಮಾರ್ಟಿನ್ ಮಾತನಾಡಿ, ಚಿಕ್ಕತಿರುಪತಿಯಿಂದ ನೂರಾರು ಕಿಲೋಮೀಟರ್ ದೂರದಿಂದ ಬಂದು ಪಟ್ಟಣದ ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ನೀಡಿರುವ ಸ್ವಾಮಿ ಅವರ ಕಾರ್ಯವನ್ನು ಶ್ಲಾಸಿದರು.
ಮುಖಂಡರಾದ ಎಸ್.ನಾರಾಯಣ ಕೆರೆ, ಆನಂದ್ ಕುಮಾರ್, ವಿ.ಅರೆಹಳ್ಳಿ ಮಂಜುನಾಥ್, ಕಾಂತರಾಜ್, ಹರೀಶ್ ಮತ್ತಿತರರು ಹಾಜರಿದ್ದರು.