ಗರ್ಭಿಣಿಯರು ಸೂಕ್ತ ಆರೈಕೆ ಪಡೆಯಬೇಕು

20 YERRISWAMY 01
Published on

ಬಳ್ಳಾರಿ : ಮಹಿಳೆಯು ತಾನು ಗರ್ಭಿಣಿ ಎಂದು ತಿಳಿದ ದಿನದಿಂದಲೇ ಸೂಕ್ತ ಆರೈಕೆ ಪಡೆಯುವುದರೊಂದಿಗೆ ತಾಯಿ-ಮಗುವಿನ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಡಿಎಚ್‌ಒ ಡಾ.ವೈ. ರಮೇಶಬಾಬು ತಿಳಿಸಿದರು.
ನಗರದ ಬಂಡಿಹಟ್ಟಿ ವ್ಯಾಪ್ತಿಯ ಆಶ್ರಯ ಕಾಲನಿಯಲ್ಲಿ ನ ಗರ್ಭಿಣಿ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಮಾತನಾಡಿದರು. ಗರ್ಭಿಣಿಯ ಆರೈಕೆಯನ್ನು ಕುಟುಂಬದ ಸದಸ್ಯರು ಅದರಲ್ಲೂ ಗಂಡನ ಮನೆಯಲ್ಲಿ ಮನೆಯ ಮಗಳಂತೆ ಕಾಳಜಿವಹಿಸಬೇಕು. ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಾಡಿಸಲು ಆದ್ಯತೆ ನೀಡಬೇಕು. ಹೆರಿಗೆಯಾದ 45 ದಿನಗಳವರೆಗೆ ತಾಯಿ-ತಂದೆ, ಗಂಡ ಹಾಗೂ ಮನೆಯ ಸದಸ್ಯರು ಬಾಣಂತಿಯ ಆರೋಗ್ಯದಲ್ಲಾಗುವ ಯಾವುದೇ ಸಮಸ್ಯೆಯನ್ನು ತಕ್ಷಣವೇ ವೈದ್ಯರ ಗಮನಕ್ಕೆ ತರುವುದರ ಜತೆಗೆ ಅಗತ್ಯ ಚಿಕಿತ್ಸೆಗೆ ನೆರವಾಗಲಿದೆ ಎಂದರು.
ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಸಮಯವಾರು ಪೌಷ್ಟಿಕ ಆಹಾರ ಹಾಗೂ ಮಗುವಿಗೆ 06 ತಿಂಗಳವರೆಗೆ ದಿನಕ್ಕೆ ಕನಿಷ್ಠ 10- 12 ಬಾರಿ ಎದೆ ಹಾಲು ಮಾತ್ರ ಉಣಿಸಬೇಕು. ತಾಯಿ ಮತ್ತು ಶಿಶುಮರಣ ತಡೆಗಟ್ಟುವ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಹೆಣ್ಣು ಮಗಳಿಗೆ 18 ವರ್ಷ ವಯಸ್ಸಿನ ನಂತರ ಮದುವೆ ಮಾಡಿಸುವುದರ ಜೊತೆಗೆ 20 ವರ್ಷ ವಯಸ್ಸಿನಲ್ಲಿ ಗರ್ಭಿಣಿ ಆದಲ್ಲಿ ಮಗುವಿನ ಬೆಳವಣಿಗೆಗೆ ಗರ್ಭಕೋಶವು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತದೆ ಮತ್ತು ಯಾವುದೇ ತೊಂದರೆಯಿಲ್ಲದೆ ಹೆರಿಗೆ ನಿರ್ವಹಿಸಲು ಸಾಧ್ಯವಾಗತ್ತದೆ ಎಂದರು.ಗರ್ಭಿಣಿಯೆಂದು ಗೊತ್ತಾದ ಕೂಡಲೇ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ತಾಯಿ ಕಾರ್ಡ ಪಡೆದು ವೈದ್ಯರ ಸಲಹೆಯಂತೆ ಅಗತ್ಯವಾದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೆಚ್‌ಐವಿ, ಹೆಚ್‌ಬಿಎಸ್‌ಎಸಿಜಿ, ಪರೀಕ್ಷೆ ಮಾಡಿಸುವದರಿಂದ ಆರಂಭದಲ್ಲಿಯೇ ನ್ಯೂನತೆಗಳನ್ನು ಸರಿಪಡಿಸಲು ಸಹಾಯಕವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net