ಗರ್ಭಿಣಿಯರು ವೈದ್ಯರ ಸಲಹೆ ಪಡೆಯಿರಿ

Published on

ಬಳ್ಳಾರಿ : ಗರ್ಭಿಣಿಯರು ಕಾಲಕಾಲಕ್ಕೆ ತಪಾಸಣೆ ಮಾಡಿಸುವ ಜತೆಗೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ ಎಂದು ಡಿಎಚ್‌ಒ ಡಾ.ಎಚ್. ರಮೇಶಬಾಬು ಹೇಳಿದರು.

ತಾಲೂಕಿನ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಖುದ್ದು ಕೈಗೊಂಡು ತಪಾಸಣೆಗೆ ಆಗಮಿಸಿದ್ದ ತಾಯಂದಿರೊಂದಿಗೆ ಚಿಕಿತ್ಸೆ ಬಗ್ಗೆ ಚರ್ಚಿಸಿ ಮಾತನಾಡಿದರು. ಕುಟುಂಬದ ಸದಸ್ಯರಿಗೆ ಗರ್ಭಿಣಿಯರಿಗೆ ಆರೈಕೆಯ ಮಹತ್ವ ಕುರಿತು ನಿರಂತರವಾಗಿ ಮಾಹಿತಿ ನೀಡುವ ಮೂಲಕ ಮನವೊಲಿಸಿ ಶಿಶು ಮರಣ ಹಾಗೂ ತಾಯಿ ಮರಣ ತಡೆಗೆ ಕ್ರಮವಹಿಸಬೇಕು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದಡಬೇಕು ಎಂದರು.

ವೈದ್ಯಾಧಿಕಾರಿ, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗಂಡಾಂತರ ಗರ್ಭಿಣಿಯರ ಮನೆ ಬೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿವಾರ ಚರ್ಚಿಸಬೇಕು. ಆಕಸ್ಮಿಕ ಘಟನೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಯಾರು ಇಲ್ಲದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ತಿಳಿಸಿ ಆರೈಕೆ ಕೇಂದ್ರಕ್ಕೆ ಕಳುಹಿಸಬೇಕು. ಹಬ್ಬ, ಜಾತ್ರೆ, ಊರ ದೇವರ ಪೂಜೆ, ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರ ಮನವೊಲಿಸಲು ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net