ಗರ್ಭಿಣಿಯರಿಗೆ ವೈದ್ಯರ ಸಲಹೆ ಅತ್ಯಗತ್ಯ

IMG_20240109_120020
Published on

ಹೊಳೆನರಸೀಪುರ: ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ತಡೆಗಟ್ಟುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಶ್ ಹೇಳಿದರು.


ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಐಸಿಟಿಸಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಗರ್ಭಿಣಿಯರ ಆರೈಕೆಗೆ ಪೂರಕ ಮಾಹಿತಿ, ಗರ್ಭಿಣಿ ಹಂತದ ಸಮಸ್ಯೆಗಳ ನಿವಾರಣೆ, ಆಗಾಗ್ಗೆ ವೈದ್ಯರ ಸಲಹೆ ಪಡೆದರೆ ಗರ್ಭಿಣಿ ತಾಯಿ ಹಾಗೂ ಜನಿಸುವ ಮಗು ಆರೋಗ್ಯವಾಗಿರುತ್ತಾರೆ ಎಂದರು.


ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಶಸ್ತ್ರಚಿಕಿತ್ಸಕ ಡಾ. ಧನಶೇಖರ್ ಮಾತನಾಡಿ, ಗರ್ಭಿಣಿ ಹಂತದಲ್ಲಿ ಜನರು ಹೆಚ್ಚಿನ ಅರಿವು ಹೊಂದಿರಬೇಕು. ಸೋಂಕುಗಳನ್ನು ತಡೆಗಟ್ಟಬೇಕಾದರೆ ವೈದ್ಯರ ಸಲಹೆ ಹಾಗೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳಿತು. ಗರ್ಭಿಣಿಯರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತವಾಗಿ ಎಲ್ಲ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಸೌಲಭ್ಯವನ್ನು ಗರ್ಭಿಣಿಯರು ಬಳಸಿಕೊಳ್ಳಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 40 ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ವೈದ್ಯರಾದ ಲೋಕೇಶ್, ರೇಖಾ, ಸುಮಾ ಮತ್ತು ಸಿಬ್ಬಂದಿ ಭಾನುಶ್ರೀ, ಮಂಜಮ್ಮ, ಜ್ಯೋತಿ, ಸುಜಾತಾ, ಮಮ್ತಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net