ಗರ್ಭಿಣಿಯರಿಗೆ ಆಟೋ ಸೇವೆ ಉಚಿತ

CTD 19 Auto 1--10
Published on


ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ಭಾಗ್ಯ ಆರಂಭವಾಗಿದ್ದು, ಇದನ್ನು ಒದಗಿಸಲು 100ಕ್ಕೂ ಅಧಿಕ ಆಟೋ ಚಾಲಕರು ಮತ್ತು ಮಾಲೀಕರು ಮುಂದಾಗಿದ್ದಾರೆ.

ಕೋಟೆನಗರಿಯ ‘ಸ್ನೇಹಜೀವಿ’ ಆಟೋ ಚಾಲಕರ ಸಂಘದಿಂದ ಈ ಸೇವೆ ನೀಡಲಾಗುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಡಿಸಿ ಜಿ.ಆರ್.ಜೆ.ದಿವ್ಯಾಪ್ರಭು ಅವರು ಆಟೋಗಳಿಗೆ ಉಚಿತ ಸೇವೆಯ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಜನಸೇವೆ ಯಾರೇ ಮಾಡಿದರೂ ಅದು ಉತ್ತಮ ಕಾರ್ಯವಾಗಲಿದೆ. ಆಟೋದವರು ಕೂಡ ಗರ್ಭಿಣಿಯರಿಗೆ ಅವರ ಮನೆ ಬಾಗಿಲಿನಿಂದ ಆಸ್ಪತ್ರೆವರೆಗೂ ಉಚಿತ ಸೇವೆ ನೀಡುವ ಮೂಲಕ ಮಾನವೀಯತೆ ಮೆರೆಯಲು ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರ ಪ್ರದೇಶಗಳಲ್ಲಿ ಆಟೋಗಳು ಇರುವ ಕಾರಣ ಜನ ತಮ್ಮ ಅನುಕೂಲಕ್ಕಾಗಿ ಅವಲಂಬಿತರಾಗಿದ್ದಾರೆ. ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಟೋದವರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಈ ಉಚಿತ ಸೇವೆಯನ್ನು ದಿನದ 24 ಗಂಟೆಯೂ ನೀಡಲಾಗುವುದು. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಜಿಲ್ಲೆಯಲ್ಲಿ ಸಾವಿರಾರು ಆಟೋಗಳಿದ್ದು, ವೃತ್ತಿಪರರ ಮೇಲೆ ಸಾರ್ವಜನಿಕ ವಲಯದಲ್ಲಿ ಗೌರವ ಹೆಚ್ಚಾಗಲು ಉಳಿದವರೆಲ್ಲರೂ ಇದೇ ರೀತಿ ಸೇವೆ ನೀಡಬೇಕು ಎಂದು ಮನವಿ ಮಾಡಿದರು.

*ಬೇಡಿಕೆ ಈಡೇರಿಕೆಗೆ ಮನವಿ:

ಜಿಲ್ಲೆಯಲ್ಲಿ ಹೊಸದಾಗಿ ರಸ್ತೆಗಿಳಿಯುವ ಆಟೋಗಳಿಗೆ ಪರವಾನಗಿ ನಿಲ್ಲಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಇದೇ ವೇಳೆ ಜಿಲ್ಲಾಧಿಕಾರಿಗೆ ಚಾಲಕರಯ ಒತ್ತಾಯಿಸಿದರು.

ಚಿತ್ರದುರ್ಗದಲ್ಲಿ 4 ಸಾವಿರ ಆಟೋಗಳಿದ್ದು, ಹೊಸ ಆಟೋ ಬಂದಂತೆಲ್ಲ ದುಡಿಮೆ ಕ್ಷೀಣಿಸುತ್ತಿದೆ. ಇದರಿಂದಾಗಿ ಚಾಲಕರು, ಮಾಲೀಕರು ಅತಂತ್ರ ಸ್ಥಿತಿ ಅನುಭವಿಸುವಂತಾಗಿದೆ. ಜೀವನ ನಿರ್ವಹಣೆಯೂ ಕಷ್ಟಕರವಾಗಲಿದೆ. ಅಲ್ಲದೆ, ವಾಹನ ದಟ್ಟಣೆ ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ ಪರವಾನಗಿ ನೀಡಬಾರದು ಎಂದು ಚಾಲಕರು ವಿನಂತಿಸಿದರು.

ನಗರದಲ್ಲಿ ಆಟೋಗಳಿಗಾಗಿ ಪ್ರತ್ಯೇಕ ನಿಲ್ದಾಣಗಳನ್ನು ನಿರ್ಮಿಸಬೇಕು. ಚಾಲಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ಅಗತ್ಯ ಮೂಲಸೌಕರ್ಯ ಒದಗಿಸಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net